ಕೂಡಿಗೆ, ಸೆ. 30: ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯಲ್ಲಿ 9ನೇ ಶಾಲಾ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪಿವಿಎಸ್‍ಎಂ ವಿ.ಎಂ. ಏರ್ ಮಾರ್ಷಲ್ ಕೆ.ಸಿ. ನಂದ ಕಾರ್ಯಪ್ಪ ಅವರು ಮಾತನಾಡಿ, ಸೈನಿಕ ಶಾಲೆಯು ವಿದ್ಯಾರ್ಥಿಗಳನ್ನು ಭಾರತೀಯ ಸೇನೆಗೆ ಸೇರ್ಪಡೆಗೊಳಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಆ ನಿಟ್ಟಿನಲ್ಲಿ ಸತತವಾದ ಪ್ರಯತ್ನದಲ್ಲಿ ತೊಡಗಿದೆ ಎಂದು ಶ್ಲಾಘಿಸಿದರು. ಹಾಗೆಯೇ ಶಾಲೆಯ ಮಕ್ಕಳು ನೀರನ್ನು ದುರ್ಬಳಕೆ ಮಾಡದೆ ಅದನ್ನು ಹಿತ ಮಿತವಾಗಿ ಬಳಕೆ ಮಾಡಬೇಕೆಂದು ಸಲಹೆಯನ್ನು ನೀಡಿದರು.
ಇದೇ ವೇಳೆ ಅವರು 2015-16ನೇ ಸಾಲಿನಲ್ಲಿ ಅತ್ಯುತ್ತಮ ಸಾಧನೆಗೈದ ಸುಬ್ರತೋ ನಿಲಯಕ್ಕೆ ಕಾಕ್ ಹೌಸ್ ಟ್ರೋಫಿಯನ್ನು ವಿತರಿಸಿದರು. ನಂತರ ಶಾಲೆಯ ವಿದ್ಯಾರ್ಥಿಗಳಾದ ಕೆಡೆಟ್ ಸುಜಿತ್ ಬಿರಾದರ್ ಮತ್ತು ಕೆಡೆಟ್ ವಿನಯ್ ಬಿ.ಎಂ. ಅವರಿಗೆ ಘರ್ವಾಲದಲ್ಲಿರುವ 20 ಸಾವಿರ ಅಡಿ ಎತ್ತರದ ಸ್ಟಾಕ್ ಕಾಂಗ್ರಾ ಬೆಟ್ಟದ ಚಾರಣದಲ್ಲಿ ಭಾಗವಹಿಸಿದ್ದರಿಂದ ಇವರುಗಳಿಗೂ ಸಹ ಮುಖ್ಯ ಅತಿಥಿಗಳು ಪ್ರಮಾಣ ಪತ್ರವನ್ನು ನೀಡುವದರ ಮೂಲಕ ಪ್ರೋತ್ಸಾಹಿಸಿದರು.
ನಂತರ ಶಾಲೆಯ ಹಿರಿಯ ವಿದ್ಯಾರ್ಥಿಗಳಾದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಟಿಪ್ಪಣಿಯ ಮೂಲಕ ನೈತಿಕ ಮೌಲ್ಯಗಳು, ಸ್ವಯಂ ರಕ್ಷಣೆಗೆ ಸಜ್ಜಾಗಿರುವಿಕೆ ಮತ್ತು ಜೀವನದ ಸಾಧನೆ ಎಂಬ ವಿಷಯವನ್ನಾಧರಿಸಿ ಸಂವಾದವನ್ನು ನಡೆಸಿದರು. ಶಾಲಾ ಸಂಸ್ಥಾಪನಾ ದಿನದ ಅಂಗವಾಗಿ ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಈ ಸಂದರ್ಭ ಶಾಲೆಯ ಎಲ್ಲಾ ಶಿಕ್ಷಕರ ವರ್ಗ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.