ಮಡಿಕೇರಿ, ಡಿ. 30: ಸಾಹಿತ್ಯ, ಸಂಸ್ಕøತಿ, ಆಚಾರ-ವಿಚಾರಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವಂತಾಗಲು ಶಾಲಾ ಕಾಲೇಜು ಹಂತದಲ್ಲಿ ಜಾನಪದವನ್ನು ಕಲಿಕಾ ವಿಷಯವಾಗಿ ಅಳವಡಿಸುವಂತಾಗ ಬೇಕು ಎಂದು ಬಿ.ಸಿ. ಶಂಕರಯ್ಯ ಸಲಹೆ ಮಾಡಿದ್ದಾರೆ.
ಕನ್ನಡ ಮತ್ತು ಸಂಸ್ಕøತಿ ನಿರ್ದೇಶನಾಲಯ, ರಂಗಾಯಣ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಜಿಲ್ಲಾಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶ ವಿದೇಶಗಳಲ್ಲಿ ಸ್ಥಳೀಯ ಸಂಸ್ಕøತಿ, ಸಾಹಿತ್ಯಗಳನ್ನು ಒಳಗೊಂಡ ಜಾನಪದ ಕಲೆಗಳು ಹೆಚ್ಚು ಪ್ರಸಿದ್ದಿ ಪಡೆಯುತ್ತಿವೆ. ಹಾಗಾಗಿ ಜನಪದ ಕಲೆಗಳ ಅಧ್ಯಯನ ಕೂಡ ಅಗತ್ಯವಾಗಿದೆ. ಶಾಲಾ -ಕಾಲೇಜುಗಳ ಹಂತದಲ್ಲಿ ಕಲಿಕಾ ವಿಷಯವಾಗಿ ಜಾನಪದ ಕಲೆಗಳನ್ನು ಅಳವಡಿಸಿ ಕೊಳ್ಳುವದು ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಮಾತನಾಡಿ, ಕಲೆ, ಸಾಹಿತ್ಯ, ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ. ಕಲೆ, ಸಾಹಿತ್ಯ, ಪರಂಪರೆಗಳು ಆಡಳಿತದ ಅವಿಭಾಜ್ಯ ಅಂಗವಾಗಿದ್ದು, ಕಲೆ, ಸಂಸ್ಕøತಿಗೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಜಾನಪದ ಪರಿಷತ್ ಮಡಿಕೇರಿ ತಾಲೂಕು ಘಟಕದ ಅಧ್ಯಕ್ಷ ಎಚ್.ಟಿ. ಅನಿಲ್ ಮಾತನಾಡಿ ಸಾಂಸ್ಕøತಿಕವಾಗಿ ಕೊಡಗನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶ್ರಮಿಸಬೇಕಿದೆ. ಆ ದಿಸೆಯಲ್ಲಿ ಜಾನಪದ ಕಲೆಗಳ ಅನಾವರಣ ಆಗಬೇಕಿದೆ ಎಂದರು.
ಜಿಲ್ಲೆಯಲ್ಲಿ ಕೊಡವ ಸಾಹಿತ್ಯ ಅಕಾಡೆಮಿ ಮತ್ತು ಅರೆಭಾಷೆ ಅಕಾಡೆಮಿಗಳು ಸಾಂಸ್ಕøತಿಕವಾಗಿ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ. ಜಿಲ್ಲಾ ಕೇಂದ್ರದಲ್ಲಿ ಉತ್ತಮ ಕಲಾ ಭವನವಿದ್ದಲ್ಲಿ ಮತ್ತಷ್ಟು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ವಾರ್ತಾಧಿಕಾರಿ ಚಿನ್ನಸ್ವಾಮಿ ಮಾತನಾಡಿ ಕನ್ನಡ ಸಾಹಿತ್ಯ, ಸಂಸ್ಕøತಿ, ಪರಂಪರೆ ಉಳಿಸಿ ಬೆಳೆಸುವಲ್ಲಿ ನಾಟಕ ಮತ್ತು ಜನಪದ ನೃತ್ಯ ಕಲೆಗಳು ಸಹಕಾರಿಯಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಗಳಲ್ಲಿ ನಾಟಕ, ಕಲೆ, ಸಂಗೀತ, ನೃತ್ಯ ಕಲೆಗಳು ಹೀಗೆ ಒಂದಲ್ಲ ಒಂದು ರೀತಿಯ ಪ್ರತಿಭೆ ಇದ್ದು, ಅವುಗಳ ಪ್ರದರ್ಶನಕ್ಕೆ ಉತ್ತಮ ವೇದಿಕೆಯನ್ನು ಸರ್ಕಾರ ಕಲ್ಪಿಸಿದೆ ಎಂದರು.
ಭಾರತೀಯ ವಿದ್ಯಾಭವನ ವ್ಯವಸ್ಥಾಪಕ ಪಿ.ಪಿ. ಸೋಮಣ್ಣ ಜಾನಪದ ನೃತ್ಯ-ನಾಟಕಗಳ ಮುಖಾಂತರ ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿರುವದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಲಿ ಎಂದು ಹಾರೈಸಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಮಣಜೂರು ಮಂಜುನಾಥ್ ಸ್ವಾಗತಿಸಿದರು. ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧೆ ಜಿಲ್ಲಾ ಸಂಚಾಲಕ ಇ.ರಾಜು ನಿರೂಪಿಸಿ, ವಂದಿಸಿದರು.
ನಂತರ ನಡೆದ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ವೀರಾಜಪೇಟೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಿ.ಎಸ್. ಪೂಣಚ್ಚ ನಿರ್ದೆಶನದಲ್ಲಿ ಜಾಗೃತಿ ನಾಟಕ ಹಾಗೂ ಎಂ.ಎನ್. ವನಿತ್ ಕುಮಾರ್ ನಿರ್ದೇಶನ ಕುಡಿಯ ನೃತ್ಯ ಪ್ರದರ್ಶನ, ವೀರಾಜಪೇಟೆ ಕಾವೇರಿ ಕಾಲೇಜಿನ ವಿದ್ಯಾರ್ಥಿಗಳು ಅಮ್ಮೆಣಿಚಂಡ ಪ್ರವೀಣ್ ಅವರ ನಿರ್ದೇಶನದಲ್ಲಿ ಸುಂದರತಾಣ ನಾಟಕ ಹಾಗೂ ಸಿ.ಎಸ್. ಪೂಣಚ್ಚ ನಿರ್ದೇಶನದಲ್ಲಿ ಕತ್ತಿಯಾಟ್, ಸುಂಟಿಕೊಪ್ಪ ಸ.ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ಡಾ. ಸುಕನ್ಯಾ ಎಸ್.ಡಿ ಅವರ ನಿರ್ದೇಶನದಲ್ಲಿ ಕಫನ್ ನಾಟಕ ಹಾಗೂ ಜಯಶ್ರಿ ಎಸ್ ಅವರ ನಿರ್ದೇಶನದಲ್ಲಿ ಜಾನಪದ ನೃತ್ಯ ಹಾಗೂ ಕೂಡಿಗೆ ಸ.ಪ.ಪೂ. ಕಾಲೇಜು ವಿದ್ಯಾರ್ಥಿಗಳಿಂದ ಪ್ರಕಾಶ್ ಬಿ. ನಿರ್ದೇಶನದ ಆಷಾಡಭೂತಿ ನಾಟಕ ಮತ್ತು ಎಂ.ಸಿ. ರಮೇಶ್ ಅವರ ನಿರ್ದೇಶನದಲ್ಲಿ ಜಾನಪದ ನೃತ್ಯ ನೆರವೇರಿತು.
ಎರಡನೇ ದಿನವಾದ ತಾ. 31 ರಂದು (ಇಂದು) ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಜಿಲ್ಲಾಮಟ್ಟದ ಕಾಲೇಜು ನಾಟಕ ಮತ್ತು ಜಾನಪದ ನೃತ್ಯ ಸ್ಪರ್ಧಾ ಕಾರ್ಯಕ್ರಮ ನಡೆಯಲಿದೆ.