ಮಡಿಕೇರಿ, ನ. 15: ಜಿಲ್ಲೆಯಲ್ಲಿ ಈ ಹಿಂದಿನಿಂದಲೂ ಹಿಂದೂಗಳು-ಮುಸಲ್ಮಾನರು ಶಾಂತಿ-ಸೌಹಾರ್ದತೆಯಿಂದ ಬದುಕುತ್ತಿದ್ದಾರೆ. ಆದರೆ ರಾಜಕೀಯ ಲಾಭಕ್ಕಾಗಿ ಹಲವರು ನಿರಂತರವಾಗಿ ಕೋಮು ಸಂಘರ್ಷವುಂಟು ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್ ಹೇಳಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸಿ ರಾಜಕೀಯ ಲಾಭ ಪಡೆಯುವ ಹುನ್ನಾರವನ್ನು ಇಂತಹವರು ನಿರಂತರವಾಗಿ ಮಾಡುತ್ತಿದ್ದಾರೆ. ಇದು ಜಿಲ್ಲೆಯ ಜನರು ಹಲವು ವರ್ಷಗಳಿಂದ, ನೋಡಿ-ತಿಳಿದು, ಅನುಭವಿಸಿರುವಂತಹ ವಿಚಾರ. ಇತ್ತೀಚೆಗೆ ಹೊಸತೋಟ, ಐಗೂರಿನಲ್ಲಿ ನಡೆದ ಧರ್ಮ ಗ್ರಂಥಗಳನ್ನು ಸುಡುವ ಹಾಗೂ ಕಾರಿನ ಮೇಲೆ ನಡೆದ ಧಾಳಿ ಇವೆಲ್ಲವೂ ಈ ‘ಅಜೆಂಡಾ’ದ ಮುಂದುವರಿದ ಭಾಗ ಹಾಗೂ ಖಂಡನೀಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಸಮಾಜದಲ್ಲಿ ಅಶಾಂತಿ ಮೂಡಿಸುವ ಈ ರಾಜಕೀಯ ಕುತಂತ್ರವನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಗಳ ಮೂಲಕ ನಿಯಂತ್ರಿಸಿ ಶಾಂತಿ ಕಾಪಾಡಬೇಕೆಂದು ಪ್ರದೀಪ್ ಒತ್ತಾಯಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಮುದಾಯದವರು ಇಂತಹ ರಾಜಕೀಯ ಷಡ್ಯಂತ್ರಗಳಿಗೆ ಮರುಳಾಗದೆ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಮೋದಿ ಸರಕಾರದ ಕಪ್ಪು ಹಣದ ಮೇಲಿನ ಕ್ರಮ ಒಳ್ಳೆಯದಾದರೂ ಸರಿಯಾದ ಮುಂಜಾಗ್ರತೆ ವಹಿಸದೆ ಬ್ಯಾಂಕ್ ಗಳಲ್ಲಿ ಆಗುತ್ತಿರುವ ತೊಂದರೆ, ಜಿಲ್ಲೆಯ ಕೂಲಿ ಕಾರ್ಮಿಕರು, ಬಡವರು ಹಾಗೂ ವ್ಯಾಪಾರಿಗಳು ಪರಿತಪಿಸುವಂತಾಗಿದೆ. ಈಗಲಾದರೂ ಬ್ಯಾಂಕ್ಗಳಲ್ಲಿ ಪರಿಸ್ಥಿತಿಯನ್ನು ಶೀಘ್ರವಾಗಿ ಸುಧಾರಿಸಬೇಕಿದೆ. ಇಲ್ಲದಿದ್ದರೆ ಜನಸಾಮಾನ್ಯರು ಸಮಸ್ಯೆ ಎದುರಿಸಬೇಕಾಗುತ್ತದೆ. ಕೇಂದ್ರ ಸರಕಾರ ಈ ಬಗ್ಗೆ ತುರ್ತು ಗಮನಹರಿಸಬೇಕೆಂದು ಅವರು ಮನವಿ ಮಾಡಿದ್ದಾರೆ.