ಸೋಮವಾರಪೇಟೆ,ನ.18: ಕೊಡಗಿನಲ್ಲಿ ಕೋಮು ಸೌಹಾರ್ದತೆ ಕದಡಲು ಕೇರಳದಿಂದ ವಲಸೆ ಬಂದ ಎರಡು ಕೋಮಿಗೆ ಸೇರಿದ ಕ್ರಿಮಿನಲ್ ಮನಸ್ಥಿತಿಯ ಕೆಲ ಮಂದಿಯೇ ಕಾರಣ. ಜಿಲ್ಲೆಯ ಪ್ರಬಲ ಜನಾಂಗಗಳಿಂದ ಈವರೆಗೆ ಯಾವದೇ ಸಂಘರ್ಷಗಳು ಏರ್ಪಟ್ಟಿಲ್ಲ ಎಂದು ರಾಜ್ಯ ಪಶು ಸಂಗೋಪನಾ ಇಲಾಖಾ ಸಚಿವ ಎ.ಮಂಜು ಅಭಿಮತ ವ್ಯಕ್ತಪಡಿಸಿದರು.ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಸಚಿವರು, ಪರಿಸ್ಥಿತಿ ಹೀಗಿದ್ದರೂ ಸಹ ಜವಾಬ್ದಾರಿಯುತ ಸ್ಥಾನದಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಒಂದು ವರ್ಗವನ್ನು ಮಾತ್ರ ಓಲೈಸುತ್ತಾ ಸಮಾಜದ ಸ್ವಾಸ್ಥ್ಯ ಕದಡುವಂತಹ ಹೇಳಿಕೆ ನೀಡಿರುವದು ಖಂಡನೀಯ ಎಂದರು. ಬಿಜೆಪಿಗೆ ಸಮಾಜದಲ್ಲಿ ಶಾಂತಿ ಸೌಹಾರ್ದತೆ ಅಗತ್ಯವಿಲ್ಲ. ಬದಲಿಗೆ ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳುವ ಸಲುವಾಗಿ ಒಂದು ಕೋಮಿನ ವಿರುದ್ಧ ಹೇಳಿಕೆ ನೀಡುತ್ತಿರುವದು ಸರಿಯಲ್ಲ ಎಂದು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡುವಾಗ ಕೊಡವ ಜನಾಂಗವನ್ನು ಪರಿಗಣಿಸಬಾರದೆಂದು ಜಿಲ್ಲೆಯ ಕೆಲವು ನಾಯಕರು ನೀಡಿರುವ ಹೇಳಿಕೆ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಯಾವದೇ ಒಂದು ಜನಾಂಗವನ್ನು ಬೊಟ್ಟು ಮಾಡಿ ಹೇಳಿಕೆ ನೀಡಬಾರದು. ಕಾಂಗ್ರೆಸ್ ಪಕ್ಷವು ಜಾತ್ಯಾತೀತ ನಿಲುವಿಗೆ ಬದ್ಧವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಉತ್ತಮ ನಾಯಕನನ್ನು ಹೈಕಮಾಂಡ್ ನೇಮಕ ಮಾಡಲಿದೆ ಎಂದು ಹೇಳಿದರು.

ರಾಜ್ಯದಲ್ಲಿ ವಾಲ್ಮೀಕಿ, ಕನಕ ಜಯಂತಿ, ಗಾಂಧಿ ಜಯಂತಿ, ವಿಶ್ವಕರ್ಮ ಸೇರಿದಂತೆ ಎಲ್ಲಾ ಜಯಂತಿಗಳನ್ನು ಆಚರಿಸುತ್ತಿರುವಾಗ ಟಿಪ್ಪು ಜಯಂತಿಗೆ ಮಾತ್ರ ವಿರೋಧವೇಕೆ? ಎಂದು ಪ್ರಶ್ನಿಸಿದ ಸಚಿವರು, ಮೈಸೂರು ರಾಜರ ಪರವಾಗಿ ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಟ ಮಾಡಿ ಕನ್ನಡಿಗರ ರಕ್ಷಣೆ ಮಾಡಿರುವದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಹೀಗಿರುವಾಗ ಯುದ್ಧ ಹಾಗೂ ರಾಜ್ಯ ವಿಸ್ತರಣೆ ಸಂದರ್ಭ ಎಲ್ಲಾ ರಾಜರ ಕಾಲದಲ್ಲಿಯೂ ಸಾವು- ನೋವು ಸಂಭವಿಸಿದೆ. ಆದರೆ ಟಿಪ್ಪು ಜಯಂತಿ ಮಾತ್ರ ಆಚರಿಸಲು ವಿರೋಧ ವ್ಯಕ್ತಪಡಿಸುವದು ಸರಿಯಲ್ಲ. ಕೇವಲ ಮತ ಗಳಿಸುವ ಹುನ್ನಾರದಿಂದ ಬಿಜೆಪಿ ಪ್ರತಿಭಟಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಐಗೂರಿನಲ್ಲಿ ಟಿಪ್ಪು ಜಯಂತಿಯ ನಂತರ ಮಸೀದಿಯಲ್ಲಿ ಕುರ್‍ಆನ್ ಸುಟ್ಟ ಪ್ರಕರಣ ಹಾಗೂ ನಂತರ ಸಂಘ ಪರಿವಾರದ ಮುಖಂಡರೊಬ್ಬರ ಕಾರ್ ಸ್ಫೋಟದ ಕುರಿತು ಪೊಲೀಸ್ ಇಲಾಖೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಜರುಗಿಸಲಿದೆ ಎಂದು ಹೇಳಿದರು. ಮುಸಲ್ಮಾನರ ಪವಿತ್ರ ಗ್ರಂಥವಾದ ಕುರ್‍ಆನ್ ಸುಡುವ ಮೂಲಕ ಮುಸಲ್ಮಾನರಿಗೆ ನೋವುಂಟು ಮಾಡಿರುವದಕ್ಕೆ

(ಮೊದಲ ಪುಟದಿಂದ) ಅಸಮಾಧಾನ ವ್ಯಕ್ತಪಡಿಸಿದ ಸಚಿವರು, ಭಗವದ್ಗೀತೆಯನ್ನು ಯಾರಾದರೂ ಸುಟ್ಟರೆ ಹಿಂದೂಗಳಿಗೆ ನೋವಾಗುವದಿಲ್ಲವೇ? ಎಂದು ಪ್ರಶ್ನಿಸಿದರು.

ಕೊಡಗಿನ ಜನಪ್ರತಿನಿಧಿಗಳಿಗೆ ಅಭಿವೃದ್ಧಿಯ ಕುರಿತು ಚಿಂತನೆಯಿಲ್ಲ. ಇಚ್ಚಾಶಕ್ತಿಯ ಕೊರತೆಯಿಂದಾಗಿ ಕೊಡಗಿನಲ್ಲಿ ಯಾವದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ತಮ್ಮ ಸ್ವಕ್ಷೇತ್ರ ಅರಕಲಗೂಡು ತಾಲೂಕಿನಲ್ಲಿ ಎರಡು ಕೆಎಸ್‍ಆರ್‍ಟಿಸಿ ಬಸ್ ಡಿಪೋಗಳಿರುವಾಗ ಸೋಮವಾರಪೇಟೆ ತಾಲೂಕಿನಲ್ಲಿ ಡಿಪೋ ಮಾಡಲು ಸಾಧ್ಯವಾಗದೇ ಇರುವದು ಇಲ್ಲಿನ ಜನನಾಯಕರ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದರು.

ಅರಕಲಗೂಡಿನಿಂದ ಸೋಮವಾರಪೇಟೆಗೆ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಅಳವಡಿಸಿದರೆ ತಕ್ಷಣ ಇಲ್ಲಿನ ಖಾಸಗಿ ಬಸ್ ಮಾಲೀಕರು ಅದನ್ನು ರದ್ದುಗೊಳಿಸುತ್ತಾರೆ. ಇನ್ನೆಲ್ಲಿಂದ ಸರ್ಕಾರಿ ಬಸ್ ಸೇವೆ ಲಭಿಸುತ್ತದೆ ಎಂದು ಎ.ಮಂಜು ಪ್ರಶ್ನಿಸಿದರು. ಜಿಲ್ಲೆಯ ಅಭಿವೃದ್ಧಿಗೆ ಇಲ್ಲಿನ ಶಾಸಕರು ಬದ್ಧತೆಯಿಂದ ಕರ್ತವ್ಯ ನಿರ್ವಹಿಸಬೇಕು. ರಾಜ್ಯ ಸರ್ಕಾರ ಕೊಡಗಿನ ಅಭಿವೃದ್ಧಿಗೆ ಸದಾ ಬದ್ಧವಾಗಿದೆ ಎಂದರು.