ಮಡಿಕೇರಿ, ಜು. 4: ತಾ. 6 ರಂದು ನಡೆಯುವ ರಂಜಾನ್ ಹಬ್ಬವನ್ನು ಶಾಂತಿ, ಸೌಹಾರ್ದತೆ ಹಾಗೂ ಶ್ರದ್ಧಾಭಕ್ತಿಯಿಂದ ಆಚರಿಸುವಂತೆ ಜಿಲ್ಲಾಡಳಿತ ಮನವಿ ಮಾಡಿದೆ. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಬಂಗೇರಾ, ನಗರಸಭೆ ಸದಸ್ಯರು, ವಿವಿಧ ಸಮಾಜದ ಮುಖಂಡರು, ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷರು, ಖಾಸಗಿ ಬಸ್ ಮಾಲೀಕರ

ಸಂಘದ ಅಧ್ಯಕ್ಷರು ಮತ್ತಿತರರ ಉಪಸ್ಥಿತಿಯಲ್ಲಿ ಸೋಮವಾರ ಶಾಂತಿ ಸಭೆ ನಡೆಯಿತು. ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಮಾತನಾಡಿ, ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕಲು ಅಭಿವೃದ್ಧಿ ಕಡೆ ಹೆಚ್ಚು ಗಮನ ಹರಿಸಬೇಕಿದೆ. ಜಿಲ್ಲೆಯಲ್ಲಿ ಸದಾ ಶಾಂತಿ ಕಾಪಾಡುವದು ಅಗತ್ಯ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್ ಮಾತನಾಡಿ, ಹಿಂದೆ ಹಬ್ಬವೆಂದರೆ ಸಂತೋಷ, ಖುಷಿ ಇರುತ್ತಿತ್ತು, ಆದರೆ ಇತ್ತೀಚಿನ ದಿನಗಳಲ್ಲಿ ಹಬ್ಬವನ್ನು ಪೊಲೀಸರ ನೆರವಿನಲ್ಲಿ ಆಚರಿಸುವಂತಾಗಿದೆ. ಇದು ನೋವಿನ ಸಂಗತಿ ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರ್, ನಗರಸಭೆ ಅಧ್ಯಕ್ಷೆ ಶ್ರೀಮತಿ ಬಂಗೇರಾ ಮಾತನಾಡಿದರು. ಮುಸ್ಲಿಂ ಸಮಾಜದ ಮುಖಂಡ ನಾಸಿರ್ ಅವರು ಮಹದೇವಪೇಟೆ ರಸ್ತೆ ಕೆಸರುಮಯವಾಗಿದ್ದು, ಹಬ್ಬ ಆಚರಿಸಲು ತುಂಬಾ ತೊಂದರೆ ಯಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.

ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ನಿರ್ದೇಶಕ ಯಾಕುಬ್, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಧಾನ ಆಯುಕ್ತ ಕೆ.ಟಿ. ಬೇಬಿಮ್ಯಾಥ್ಯು, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಆಟೋ ಮಾಲೀಕರ ಮತ್ತು ಚಾಲಕರ ಸಂಘಧ ಅಧ್ಯಕ್ಷ ಮೇದಪ್ಪ, ನಗರಸಭೆ ಸದಸ್ಯರಾದ ಉಸ್ಮಾನ್, ಅನಿತಾ ಪೂವಯ್ಯ, ವೀಣಾಕ್ಷಿ, ಬಜರಂಗದಳದ ಮುಖಂಡರು ಮಾತನಾಡಿದರು. ಸದಸ್ಯರಾದ ಲಕ್ಷ್ಮಿ, ಮನ್ಸೂರ್, ಹಮೀದ್ ಮೊಹಿಸಿನ್, ಪೀಟರ್ ಮತ್ತಿತರರು ಇದ್ದರು. ರಂಜಾನ್ ಹಬ್ಬದ ಶಾಂತಿಸಭೆಯಲ್ಲಿ ಮಹದೇವಪೇಟೆ ರಸ್ತೆಗೆ ಸಂಬಂಧಿಸಿ ದಂತೆಯೇ ಹೆಚ್ಚು ಚರ್ಚೆ ನಡೆಯಿತು.