ಪೊನ್ನಂಪೇಟೆ, ನ. 23: ಎಲ್ಲಾ ಜನಾಂಗದವರ ಸಹೋದರತೆಯ ಬದುಕಿಗೆ ಗಟ್ಟಿ ನೆಲೆಯಾಗಿದ್ದ ಕೊಡಗಿನಲ್ಲಿ ಕಳೆದ ಕೆಲವು ಸಮಯಗಳಿಂದ ಕೋಮು ಗಲಭೆಯ ಮೂಲಕ ಅಶಾಂತಿ ಸೃಷ್ಟಿಸಲು ಸಮಾಜಘಾತುಕ ಶಕ್ತಿಗಳು ವ್ಯವಸ್ಥಿತವಾದ ಷಡ್ಯಂತರಗಳನ್ನು ರೂಪಿಸಿ ನಿರಂತರವಾದ ಪ್ರಯತ್ನ ಗಳನ್ನು ನಡೆಸುತ್ತಿದೆ. ಇದರ ಭಾಗವಾಗಿ ಯೇ ಇತ್ತಿಚೆಗೆ ಸೋಮವಾರಪೇಟೆ ತಾಲೂಕಿನ ಐಗೂರಿನ ಮಸೀದಿ ಯೊಂದಕ್ಕೆ ನುಗ್ಗಿ ಕಿಡಿಗೇಡಿಗಳು ಅಲ್ಲಿದ್ದ ಪವಿತ್ರ ಧರ್ಮ ಗ್ರಂಥವಾದ ಕುರಾನಿಗೆ ಬೆಂಕಿ ಹಚ್ಚಿದ್ದು, ಇದನ್ನು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ತೀವ್ರವಾಗಿ ಖಂಡಿಸುತ್ತದೆ ಎಂದು ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಅವರು ತಿಳಿಸಿದ್ದಾರೆ.
ಇಲ್ಲಿ ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮವೊಂದರ ನಂಬಿಕೆಯ ಪ್ರತೀಕವಾಗಿರುವ ಪವಿತ್ರ ಧರ್ಮ ಗ್ರಂಥವಾದ ಕುರಾನಿಗೆ ಬೆಂಕಿ ಹಚ್ಚಿ ನಾಶಪಡಿಸಿದ ಪ್ರಕರಣ ಸಾಮಾನ್ಯ ವಾದುದಲ್ಲ. ಇದರಿಂದ ಸಮಸ್ತ ಧರ್ಮಾನುಯಾಯಿಗಳ ಭಾವನೆಗೆ ಅತೀವ ಧಕ್ಕೆ ಉಂಟಾಗಿದ್ದು, ಇದು ಸಮಾಜದಲ್ಲಿ ಸಹಬಾಳ್ವೆಗೆ ವಿರುದ್ಧವಾದ ಸಂದೇಶವಾಗಿದ್ದು, ಇಡೀ ನಾಗರಿಕ ಸಮಾಜವೇ ಇದರಿಂದ ತಲೆ ತಗ್ಗಿಸುವಂತಾಗಿದೆ. ಯಾವದೇ ವರ್ಗದ ಪ್ರಜ್ಞಾವಂತರಾರು ಈ ಕೃತ್ಯ ಮಾಡಿಲ್ಲ. ಸಮಾಜದಲ್ಲಿ ಅಶಾಂತಿ ಸೃಷ್ಟಿಸಿ ಆ ಮೂಲಕ ವಿಕೃತ ಸಂತೋಷ ಅನುಭವಿಸುವ ಕಿಡಿಗೇಡಿಗಳ ಈ ಕೃತ್ಯ ಅಕ್ಷ್ಯಮ್ಯ ಅಪರಾಧ ಎಂದು ಡಿ.ಹೆಚ್. ಸೂಪಿ ಅವರು ಹೇಳಿದರು.
ಕುರಾನಿಗೆ ಬೆಂಕಿ ಹಚ್ಚಿ ನಾಶಪಡಿಸಿದ ಪ್ರಕರಣವನ್ನು ಪೊಲೀಸ್ ಇಲಾಖೆ ಮತ್ತು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಆರೋಪಿಗಳು ಯಾರೇ ಇದ್ದರೂ ಮತ್ತು ಆರೋಪಿಗಳಿಗೆ ಬೆಂಬಲ ನೀಡುವವರು ಎಷ್ಟೇ ಪ್ರಭಾವಿ ಗಳಿದ್ದರೂ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಗೋಷ್ಠಿಯಲ್ಲಿ ಕೆ.ಎಂ.ಎ ಉಪಾಧ್ಯಕ್ಷರುಗಳಾದ ಡಾ. ಜೋಯಿಪೆರ ಎ. ಕುಂಞಬ್ದುಲ್ಲ, ಆಲೀರ ಎ.ಅಹಮ್ಮದ್ ಹಾಜಿ, ಕಾರ್ಯದರ್ಶಿ ಪುದಿಯತ್ತಂಡ ಹೆಚ್.ಸಂಶುದ್ದೀನ್, ಜಂಟಿ ಕಾರ್ಯದರ್ಶಿ ಮಂಡೇಡ ಎ. ಮೊಯ್ದು ಮತ್ತು ಕೆ.ಎಂ.ಎ ಸದಸ್ಯತ್ವ ಅಭಿಯಾನದ ಉಪಸಮಿತಿ ಅಧ್ಯಕ್ಷÀ ಚಿಮ್ಮಿಚಿರ ಕೆ. ಇಬ್ರಾಹಿಂ (ಉಮ್ಣಿ) ಅವರು ಹಾಜರಿದ್ದರು.