ಸೋಮವಾರಪೇಟೆ, ಜ. 16: ಕಳೆದ ತಾ. 13ರಿಂದ ಪ್ರಾರಂಭ ವಾಗಿರುವ ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀಕುಮಾರಲಿಂಗೇಶ್ವರ ಜಾತ್ರೋತ್ಸವಕ್ಕೆ ತಾ. 17 ರಂದು (ಇಂದು) ವಿಧ್ಯುಕ್ತ ತೆರೆ ಬೀಳಲಿದೆ. ದೇವಾಲಯದಲ್ಲಿ ಮಹಾ ಸಂಪ್ರೋಕ್ಷಣೆ, ಪಂಚಾಮೃತಾ ಭಿಷೇಕ, ಕ್ಷೀರಾಭಿಷೇಕ, ನಾರಿಕೇಳ ಜಲಾಭಿಷೇಕ, ಮಹಾಮಂಗಳಾರತಿ ನಂತರ ಮಂಗಳ ಪ್ರಾರ್ಥನೆ ನಡೆಯುವ ಮೂಲಕ ಪ್ರಸಕ್ತ ವರ್ಷದ ಜಾತ್ರಾ ಮಹೋತ್ಸವ ಮುಕ್ತಾಯ ಗೊಳ್ಳಲಿದೆ.

ತಾ. 17ರಂದು ಅಪರಾಹ್ನ 2 ಗಂಟೆಗೆ ಜಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಸೇರಿದಂತೆ ಶಾಸಕ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯರಾದ ಸುನೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಹರೀಶ್, ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಂಜೆ 5 ಗಂಟೆಯಿಂದ ಸುಧಾ ಬರಗೂರು ಮತ್ತು ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಲಿದೆ.

ಜನರನ್ನು ಆಕರ್ಷಿಸಿದ ವಸ್ತು ಪ್ರದರ್ಶನ: ಜಾತ್ರೋತ್ಸವದ ಪ್ರಯುಕ್ತ ದೇವಾಲಯದ ಆವರಣದಲ್ಲಿ ತೆರೆಯಲಾಗಿರುವ ವಸ್ತು ಪ್ರದರ್ಶನ ಮಳಿಗೆ ಸಾವಿರಾರು ಮಂದಿಯನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಕೃಷಿ ಹಾಗೂ ತೋಟಗಾರಿಕಾ ಇಲಾಖಾ ವತಿಯಿಂದ ತೆರೆಯ ಲಾಗಿರುವ ಮಳಿಗೆಗೆ ನೂರಾರು ಮಂದಿ ಭೇಟಿ ಕೊಟ್ಟು ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು.

ತೋಟಗಾರಿಕಾ ಇಲಾಖಾ ಮಳಿಗೆಯಲ್ಲಿ ತರಹೇವಾರಿ ತರಕಾರಿ ಗಳು, ಅಪರೂಪದ ಜೀವವೈವಿಧ್ಯ ಗಳು, ಹಣ್ಣು-ಹಂಪಲುಗಳ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದ್ದು, ತಲ್ತರೆಶೆಟ್ಟಳಿಯ ಪ್ರಸನ್ನಕುಮಾರ್-ಸುಖಾಂತ ಅವರು ಬೆಳೆದಿರುವ 36 ಕೆ.ಜಿ. ತೂಕದ ಹುತ್ತರಿ ಗೆಣಸು ಆಕರ್ಷಿಸಿತು.

ಇದರೊಂದಿಗೆ ತಣ್ಣೀರುಹಳ್ಳ ಗ್ರಾಮದ ರೂಪಾ ಹರೀಶ್ ಅವರು ಸಂಗ್ರಹಿಸಿರುವ ಹÀಳೆಯ ಕಾಲದ ನೂರಾರು ನಾಣ್ಯಗಳು, ಚಿಕ್ಕ ತೋಳೂರಿನ ಸಿ.ಎ. ಕಾಳಪ್ಪ ಅವರು ಸಂಗ್ರಹಿಸಿರುವ ಬೃಹತ್ ಕಡಜದ ಗೂಡು, ನೇಗಳ್ಳೆ ಗ್ರಾಮದ ಅಭಿಷೇಕ್ ಪೂವಯ್ಯ ಅವರು ಬೆಳೆದಿರುವ 18 ಕೆ.ಜಿ. ತೂಕದ ಕ್ಯಾನೆ ಗೆಣಸು, ಕುಶಾಲಪ್ಪ ಹಾಗೂ ಕೆ.ಪಿ. ಭಾಗ್ಯ ಅವರ ಮನೆಯಲ್ಲಿ ಬೆಳೆದಿರುವ 6 ಮೀಟರ್ ಉದ್ದದ ಕಬ್ಬು, ಕೊತ್ನಳ್ಳಿಯ ಉತ್ಸವ್ ಅರುಣ್ ಅವರ ತೋಟದಲ್ಲಿ ಬೆಳೆದ ಬೃಹತ್ ದಗ್ಗುಳಿ ಕಾಯಿ ಸೇರಿದಂತೆ ವಿವಿಧ ಗುಣಮಟ್ಟದ ಜೇನು ತುಪ್ಪ, ಜೇನು ಹುರಿ, ಮೇಣ, ಅಡಿಕೆ, ವಿವಿಧ ತಳಿಯ ತರಕಾರಿ, ಗೆಡ್ಡೆ ಗೆಣಸುಗಳು ಎಲ್ಲರ ಗಮನಸೆಳೆದವು.

ತೋಟಗಾರಿಕಾ ಇಲಾಖೆಯ ಯೋಜನೆಗಳ ಬಗ್ಗೆ ಸಹಾಯಕ ತೊಟಗಾರಿಕಾ ಅಧಿಕಾರಿ ಕಾವ್ಯ, ಜೇನು ಕೃಷಿ ಸಹಾಯಕ ರಾಜು, ಸಿಬ್ಬಂದಿ ರವಿಕುಮಾರ್ ಅವರುಗಳು ರೈತರಿಗೆ ಮಾಹಿತಿ ನೀಡಿದರು.

ಕೃಷಿ ಇಲಾಖೆಯ ಮಳಿಗೆಯಲ್ಲಿ ಕೈಚಾಲಿತ ಹಾಗೂ ಬ್ಯಾಟರಿ ಚಾಲಿತ ಸ್ಪ್ರೇಯರ್‍ಗಳು, ಕೃಷಿ ಪರಿಕರಗಳು, ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಎರೆಗೊಬ್ಬರ, ಅಝೋಲಾ, ಬೇರೆ ಬೇರೆ ತಳಿಯ ಭತ್ತದ ಬೀಜಗಳ ಬಗ್ಗೆ ಆಸಕ್ತ ಕೃಷಿಕರಿಗೆ ಶಾಂತಳ್ಳಿಯ ಕೃಷಿ ಅಧಿಕಾರಿ ಪಲ್ಲವಿ, ಸಹಾಯಕ ತಾಂತ್ರಿಕ ಅಧಿಕಾರಿ ರಂಜಿತ ಅವರುಗಳು ಮಾಹಿತಿ ನೀಡಿದರಲ್ಲದೆ, ಕೃಷಿ ಇಲಾಖೆಯ ವಿವಿಧ ಯೋಜನೆಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

–ವಿಜಯ್ ಹಾನಗಲ್