ಸೋಮವಾರಪೇಟೆ, ಡಿ. 7: ಸಮೀಪದ ಶಾಂತಳ್ಳಿ ಹೋಬಳಿಯ ಬೆಟ್ಟದಳ್ಳಿ ಗ್ರಾಮದಲ್ಲಿ ಹಿರಿಯರ ಪರಿಶ್ರಮದಿಂದ ಸ್ಥಾಪನೆಯಾಗಿರುವ ಶ್ರೀ ಕುಮಾರಲಿಂಗೇಶ್ವರ ವಿದ್ಯಾಸಂಸ್ಥೆಗೆ 50 ವರ್ಷಗಳು ತುಂಬಿದ್ದು, ತಾ. 9 ಮತ್ತು 10 ರಂದು ಸುವರ್ಣ ಮಹೋತ್ಸವ ಸಮಾರಂಭ ಏರ್ಪಡಿಸಲಾಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಟಿ.ಪಿ. ಚಂಗಪ್ಪ ಹೇಳಿದರು.

ಇಲ್ಲಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ಮಾಡಿದ ಶಾಲೆಯಲ್ಲಿ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಆಯೋಜಿಸಲು ನಾಡಿನ ಹಿರಿಯರು, ಹಿರಿಯ ವಿದ್ಯಾರ್ಥಿಗಳು, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಸಿದ್ದತೆಯಲ್ಲಿ ತೊಡಗಿಕೊಂಡಿದೆ ಎಂದರು.

ತಾ. 9 ರಂದು ಶಾಲಾ ಆವರಣದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಕ್ರೀಡಾ ಸ್ಪರ್ಧೆಗಳಿದ್ದು, ಸಂಜೆ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ. ತಾ. 10 ರಂದು ಮಧ್ಯಾಹ್ನ 4.30ಕ್ಕೆ ಸುವರ್ಣ ಮಹೋತ್ಸವ ಸಮಾರಂಭ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಸುನಿಲ್ ಸುಬ್ರಮಣಿ, ಜಿ.ಪಂ. ಅಧ್ಯಕ್ಷ ಹರೀಶ್, ಮಾಜಿ ಸಚಿವ ಬಿ.ಎ. ಜೀವಿಜಯ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ದಾನಿಗಳಾದ ಹರಪಳ್ಳಿ ರವೀಂದ್ರ, ಅರುಣ್ ಕುಮಾರ್, ತಾ.ಪಂ. ಮಾಜಿ ಅಧ್ಯಕ್ಷ ಕೆ.ಎಂ. ಲೋಕೇಶ್ ಭಾಗವಹಿಸ ಲಿದ್ದಾರೆ ಎಂದು ಹೇಳಿದರು.

ಕುಮಾರಲಿಂಗೇಶ್ವರ ಶಾಲೆಯ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ಪ್ರಸಕ್ತ ಸಾಲಿನಿಂದ ಪೂರ್ವ ಪ್ರಾಥಮಿಕ ಶಾಲೆ ಪ್ರಾರಂಭಿಸಿದ್ದು, 38 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ವಸತಿ ಶಾಲೆಯನ್ನು ಸ್ಥಾಪಿಸುವ ಯೋಜನೆ ಸಮಿತಿಯ ಮುಂದಿದೆ ಎಂದರು.

ಗೋಷ್ಠಿಯಲ್ಲಿ ಶಾಲಾಭಿವೃದ್ದಿ ಸಮಿತಿಯ ಕಾರ್ಯದರ್ಶಿ ಕೆ.ಎಸ್. ಸುಂದರ್, ಖಜಾಂಚಿ ಎ.ಕೆ. ಮಾಚಯ್ಯ, ಆಡಳಿತಾಧಿಕಾರಿ ಕಾಳಯ್ಯ ಇದ್ದರು.