ಸೋಮವಾರಪೇಟೆ, ಡಿ. 20: ಶರಣರ ಶ್ರೇಷ್ಟ ಚಿಂತನೆಗಳನ್ನು ಸಮಾಜಕ್ಕೆ ಧಾರೆಯೆರೆಯುವ ಮೂಲಕ ಸಕಾರಾತ್ಮಕ ಸಮಾಜವನ್ನು ನಿರ್ಮಿಸುವ ಉದ್ದೇಶದಿಂದ ಶರಣ ಸಾಹಿತ್ಯ ಪರಿಷತ್ ಕಾರ್ಯನಿರ್ವ ಹಿಸುತ್ತಿದ್ದು, ಇದು ಯಾವದೇ ಒಂದು ವರ್ಗ, ಜಾತಿಗೆ ಸೀಮಿತವಾಗಿಲ್ಲ. ಸಮಾಜದ ಸರ್ವರನ್ನೂ ಒಳಗೊಂಡು ಸಾಮಾಜಿಕ ಚಿಂತನೆ ಹುಟ್ಟುಹಾಕುವ ವೇದಿಕೆಯಾಗಿದೆ ಎಂದು ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ ಇಲ್ಲಿನ ವಿರಕ್ತ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಪರಿಷತ್ನ ಪ್ರಥಮ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದಾಸರು, ವಚನಕಾರರು, ಶರಣರ ಚಿಂತನೆಗಳನ್ನು ಪ್ರತಿ ಮನೆಗೂ ತಲಪಿಸುವ ಕಾರ್ಯ ಆಗಬೇಕಿದೆ. ನಕಾರಾತ್ಮಕ ಚಿಂತನೆಗಳಲ್ಲೇ ಮುಳುಗಿರುವ ಸಮಾಜದಲ್ಲಿ ಸಕಾರಾತ್ಮಕ ಚಿಂತನೆಗಳನ್ನು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ ಕಾರ್ಯನಿರ್ವಹಿಸುತ್ತಿದೆ ಎಂದರು. ಧರ್ಮದ ತಳಹದಿಯ ಮೇಲೆ ಸಮಾಜ ನೆಲೆ ನಿಲ್ಲಬೇಕು. ಸಮಾಜಕ್ಕೆ ಪೂರಕವಾಗುವ ಸಾಮಾಜಿಕ ಕಾಳಜಿಯ ಚಿಂತನೆ ಇರುವವರು ಪರಿಷತ್ನೊಂದಿಗೆ ಕೈಜೋಡಿಸಬೇಕು ಎಂದು ಸ್ವಾಮೀಜಿ ಮನವಿ ಮಾಡಿದರು.
ಕಲ್ಲುಮಠದ ಮಠಾಧೀಶ ಮಹಾಂತ ಸ್ವಾಮೀಜಿ ಮಾತನಾಡಿ, ಧರ್ಮ ಮತ್ತು ಸಂಸ್ಕøತಿಯನ್ನು ಬಿಡದೆ ಮಾನವನಾಗಿ ಮಾನವೀಯ ಮೌಲ್ಯಗಳನ್ನು ಉಳಿಸಿಕೊಂಡು ಸಾಗುವದೇ ಮನುಷ್ಯತ್ವ. ಯಾವದೇ ಜಾತಿ, ಧರ್ಮ, ವರ್ಗದ ಬೇಧವಿಲ್ಲದೆ ಶರಣ ಸಾಹಿತ್ಯದ ವಿವಿಧ ಮಜಲುಗಳನ್ನು ಜಿಲ್ಲೆಯಾದ್ಯಂತ ಪಸರಿಸಲು ಆಸಕ್ತರು ಮುಂದೆ ಬಂದರೆ ಮಾತ್ರ ಶರಣ ಸಾಹಿತ್ಯ ಬೆಳೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ವಿರಕ್ತ ಮಠದ ಮಠಾಧೀಶ ವಿಶ್ವೇಶ್ವರ ಸ್ವಾಮೀಜಿ ಮಾತನಾಡಿ, ಇಂದು ಹಲವಾರು ಸಮಾಜಗಳು ತಾವೇ ಮೇಲು ಎಂಬಂತೆ ಸಂಘರ್ಷಕ್ಕೆ ಇಳಿದಿರುವದು ದುರಾದೃಷ್ಟಕರ. ಸಮಾಜಗಳು ಪೈಪೋಟಿಗೆ ಇಳಿದಾಗ ದೇಶದ ಭವಿಷ್ಯ ಅಂಧಕಾರದಲ್ಲಿ ಮುಳುಗುತ್ತದೆ. ನ್ಯಾಯ ಮಾರ್ಗದಲ್ಲಿ ನಡೆದು ಕರುಣೆಯಲ್ಲಿ ಆಸಕ್ತನಾಗಿ ವಿಧೇಯತೆಯಿಂದ ನಡೆದುಕೊಳ್ಳು ವವರನ್ನು ಮಾತ್ರ ಭಗವಂತ ಮೆಚ್ಚುತ್ತಾನೆ ಎಂದರು.
ಮುಖ್ಯ ಅತಿಥಿಯಾಗಿದ್ದ ಇಲ್ಲಿನ ಸಂತ ಜೋಸೆಫರ ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಮೊಂತೆರೋ ಮಾತನಾಡಿ, ಸಾಮಾಜಿಕ ಅಸಮಾನತೆಯ ವಿರುದ್ಧ ತಮ್ಮ ಕೀರ್ತನೆ, ವಚನಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದ ಶರಣರ ಮಾರ್ಗದರ್ಶನದಲ್ಲಿ ಎಲ್ಲರೂ ನಡೆಯುವ ಮೂಲಕ ಶರಣರಿಗೆ ಗೌರವ ಸಲ್ಲಿಸಬೇಕು ಎಂದರು.
ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಮಾತನಾಡಿ, ಸಮಾಜದಲ್ಲಿ ವರ್ಗ ವರ್ಗಗಳ ನಡುವೆ ಕಂದಕ ಹೆಚ್ಚಾಗುತ್ತಿದ್ದು, ಇದು ತೊಲಗಿ ಸಮಾನತೆಯ ಭಾವ ಮೂಡಬೇಕಿದೆ. ಶರಣರ ಸಾಹಿತ್ಯವನ್ನು ಜನರ ಮನಸ್ಸಿಗೆ ಮುಟ್ಟಿಸುವ ಮೂಲಕ ಸಾಹಿತ್ಯದ ಸಾರವನ್ನು ಇನ್ನಷ್ಟು ಪಸರಿಸಬೇಕಿದೆ ಎಂದರು.
ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಎಸ್. ಮಹೇಶ್ ವಹಿಸಿದ್ದರು. ವೇದಿಕೆಯಲ್ಲಿ ಮುದ್ದಿನಕಟ್ಟೆ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ, ಕಲ್ಲಳ್ಳಿ ಮಠದ ರುದ್ರಮುನಿ ಸ್ವಾಮೀಜಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯರಾದ ಕುಮುದಾ ಧರ್ಮಪ್ಪ, ಬಿ.ಜಿ. ದೀಪಕ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್. ವಿಜಯಲಕ್ಷ್ಮೀ ಸುರೇಶ್ ಅವರುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭ ನೂತನ ಜಿಲ್ಲಾ ಸಮಿತಿ ರಚಿಸಲಾಯಿತು. ಜಿಲ್ಲೆಯಲ್ಲಿ ಶರಣ ಸಾಹಿತ್ಯ ಪರಿಷತ್ನ ಮುಂದಿನ ಕಾರ್ಯಚಟುವಟಿಕೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.