ಕೂಡಿಗೆ, ನ. 6: ಧರ್ಮಕ್ಕಿಂತ ಮೊದಲ ಆದ್ಯತೆ ಇರುವದು ಮಾನವನ ವ್ಯಕ್ತಿತ್ವಕ್ಕೆ. ಶರಣ ಸಾಹಿತ್ಯ ಪರಿಷತ್ತಿಗೆ ಯಾವದೇ ಜಾತಿ, ಮತ, ಪಂಥದ ಬೇಧವಿಲ್ಲ. ಆದರೆ ಇಂತಹ ಸಂಸ್ಥೆಗಳ ಅಧ್ಯಕ್ಷರಾದವರಿಗೆ ಸಾಮಾಜಿಕ ಜ್ಞಾನ ನೈತಿಕತೆ ಮುಖ್ಯ ಎಂದು ಅಖಿಲ ಭಾರತ ಶರಣ ಶಾಹಿತ್ಯ ಪರಿಷತ್ತಿನ ರಾಷ್ಟ್ರಾಧ್ಯಕ್ಷ ಗೊ.ರು. ಚನ್ನಬಸಪ್ಪ ಹೇಳಿದರು. ತೊರೆನೂರು ವಿರಕ್ತ ಮಠದಲ್ಲಿ ಆಯೋಜಿಸಲಾಗಿದ್ದ ಅಖಿಲ ಭಾರತ ಶರಣ ಶಾಹಿತ್ಯ ಪರಿಷತ್ತಿನ ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು ಈ ಪರಿಷತ್ತು ಒಂದೇ ಜಾತಿ ಧರ್ಮಗಳನ್ನು ಅವಲಂಭಿಸಿದ ಸಂಸ್ಥೆಯಂತಲ್ಲ 12500 ಸದಸ್ಯರನ್ನು ಒಳಗೊಂಡಿದೆ. ಸದಸ್ಯರೆಲ್ಲ ಇಷ್ಟಪಟ್ಟು ನೊಂದಣಿಯಾದವರು. ಶರಣರ ವಚನ ಸಂಗೀತದ ಮೌಲ್ಯಗಳು ಬೇರೆ ಬೇರೆದೇಶಗಳಲ್ಲೂ ಪ್ರಚಾರಗೊಳ್ಳುತ್ತಿವೆ ಎಂದರು.

ಶರಣರ ಸಂಸ್ಕೃತಿಯ ಹಾಗೂ ಮೌಲ್ಯಗಳನ್ನು ಒಪ್ಪಿ ಅವರ ಸಂದೇಶಗಳಿಗೆ ಬೆಲೆಕೊಟ್ಟು ಸುಸಂಸ್ಕೃತ ಸಮಾಜ ಕಟ್ಟುವ ವ್ಯಕ್ತಿತ್ವ ಉಳ್ಳವರು ಪರಿಷತ್ತಿನ ಸದಸ್ಯರಾಗಬಹುದು ಎಂದರು.

ಈ ಸಂದರ್ಭ ವೇದಿಕೆಯಲ್ಲಿ ತೊರೆನೂರು ವಿರಕ್ತಮಠದ ಮಲ್ಲೇಶ ಸ್ವಾಮೀಜಿ, ಸೋಮವಾರಪೇಟೆ ಮಠದ ವಿಶ್ವೇಶ್ವರ ಸ್ವಾಮೀಜಿ, ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ್ ಸಾದರ, ಪ್ರಧಾನ ಕಾರ್ಯದರ್ಶಿ ಅಪ್ಪಾರಾವ್ ಅಕ್ಕೋಣೆ, ಶ್ರೀಶೈಲ ಪಟ್ಟಣ ಶೆಟ್ಟಿ, ಪುಟ್ಟರಾಜು ಇದ್ದರು.

ಸಭೆಯಲ್ಲಿ ವೀರಶೈವ ಮಹಾಸಭಾದ ರಾಜ್ಯ ಕಾರ್ಯನಿರ್ವಾಹಕ ಕೆ.ಸಿ. ನಂಜುಂಡಸ್ವಾಮಿ, ಕೊಡಗು ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ, ಪ್ರಮುಖರಾದ ಜಿ.ಎಂ. ಕಾಂತರಾಜ್, ಬಿ.ಎಸ್. ಚಂದ್ರಶೇಖರ್, ಡಿ.ಬಿ. ಸೋಮಪ್ಪ, ಕೆ.ಎನ್. ಸಂದೀಪ್, ಎಸ್.ಎಸ್. ಸುರೇಶ್, ಎಸ್. ಮಹೇಶ್, ಎನ್.ಎ. ಅಶ್ವತ್ ಕುಮಾರ್, ನಂಜಪ್ಪ, ರಾಜಶೇಖರ್ ಕೋಟೆ, ಪುಷ್ಪ ನಾಗರಾಜ್ ಮುಂತಾದವರು ಇದ್ದರು.

ರಾಷ್ಟಾಧ್ಯಕ್ಷರ ಕ್ಷಮೆಯಾಚನೆ

ಕಳೆದ 1 ವರ್ಷ 6 ತಿಂಗಳಿಂದ ಕೇಂದ್ರ ಸಮಿತಿಗೆ ತಪ್ಪು ಮಾಹಿತಿ ನೀಡಿ ಪರಿಷತ್ತಿನ ಸದಸ್ಯನೇ ಅಲ್ಲದ ಕೆ.ಎಸ್. ಮೂರ್ತಿ ಅವರನ್ನು ಅಧ್ಯಕ್ಷನಾಗಿ ಘೋಷಣೆ ಮಾಡಿದ್ದಕ್ಕೆ ಸಭೆಯಲ್ಲಿ ಸರ್ವ ಸದಸ್ಯರ ಮುಂದೆ ರಾಷ್ಟಾಧ್ಯಕ್ಷ ಗೊ.ರು. ಚನ್ನಬಸಪ್ಪ ಕ್ಷಮೆ ಯಾಚಿಸಿದರು.