ವೀರಾಜಪೇಟೆ, ಆ.3: ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಕಿರುಗೂರು ಗ್ರಾಮದ ಹೊನ್ನಿಕೊಪ್ಪಲಿನ ಶ್ರೀಮೂಲ ಶನೀಶ್ವರ ದೇವಸ್ಥಾನದಲ್ಲಿ ಈ ಬಾರಿ ತಾ. 6ರಿಂದ 27ರವರೆಗೆ ಆಚರಿಸುವ ನಾಲ್ಕು ಶನಿವಾರಗಳಲ್ಲಿ ಶ್ರಾವಣ ಪೂಜೋತ್ಸವವನ್ನು ರದ್ದು ಪಡಿಸಲಾಗಿದೆ ಎಂದು ದೇವಾಲಯದ ಟ್ರಸ್ಟ್‍ನ ಅಧ್ಯಕ್ಷೆ ಸಿ.ಜಿ. ಲಲಿತ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಲಲಿತ ಅವರು ಅನೇಕ ವರ್ಷಗಳ ಹಿಂದೆ ಹುಲ್ಲಿನ ಹೊದಿಕೆಯ ಗುಡಿಸಲಿನಲ್ಲಿ ಆರಂಭಗೊಂಡ ಹೊನ್ನಿಕೊಪ್ಪಲು ಶ್ರೀಮೂಲ ಶನೀಶ್ವರ ದೇವಾಲಯವನ್ನು ಆಡಳಿತ ಮಂಡಳಿಯ ಟ್ರಸ್ಟ್‍ನ ವತಿಯಿಂದ ಉದಾರ ದಾನಿಗಳ ಸಹಕಾರದಿಂದÀ ಜೀರ್ಣೋದ್ಧಾರಗೊಳಿಸಿ ದೇವಾಲಯದಲ್ಲಿ ಪೂಜೋತ್ಸವಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಯಿತು. ದೇವಾಲಯದ ಪೂಜೆ ಪುನಸ್ಕಾರಗಳಿಗಾಗಿ ಅದೇ ಊರಿನ ಎಚ್.ಎಂ. ರಾಮು ಎಂಬವರನ್ನು ನೇಮಕ ಮಾಡಲಾಗಿತ್ತು. ಆದರೆ ರಾಮು ದೇವಾಲಯದ ಟ್ರಸ್ಟಿಗಳಿಗೆ ಗೌರವ ಕೊಡದೆ ತನ್ನ ಮಗ ಎಚ್.ಆರ್ ಮಲ್ಲಪ್ಪನೊಂದಿಗೆ ಸೇರಿ ಸಾರ್ವಜನಿಕ ಭಕ್ತಾದಿಗಳಿಗಿರುವ ಈ ದೇವಾಲಯವನ್ನು ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ.

ಅರ್ಚಕ ರಾಮು ಹಾಗೂ ಮಲ್ಲಪ್ಪ ಟ್ರಸ್ಟಿಗಳ ಅನುಮತಿ ಇಲ್ಲದೆ ಭಕ್ತಾದಿಗಳಿಗೆ ಅನಗತ್ಯ ಪೂಜೆಯನ್ನು ಮಾಡುವದು. ಭಕ್ತಾದಿಗಳಿಂದ ಅನಗತ್ಯ ಪೂಜೆಗಳಿಗಾಗಿ ಬರುವ ದುಬಾರಿ ಹಣ, ಕಾಣಿಕೆ, ಹರಕೆಯ ಬೆಳ್ಳಿ ಸಾಮಗ್ರಿಗಳನ್ನು ಸ್ವಂತಕ್ಕೆ ಬಳಕೆ ಮಾಡುತ್ತಿದ್ದಾರೆ. ಪೂಜೆಯ ಹಣ, ಹರಕೆಯ ಸಾಮಗ್ರಿಗಳ ದುರುಪಯೋಗದ ಕುರಿತು ಟ್ರಸ್ಟ್ ಸದಸ್ಯರು ವಿಚಾರಿಸಿದರೆ ಟ್ರಸ್ಟ್‍ಗೆ ಸಂಬಂಧವಿಲ್ಲ ಎಂದು ಹಾರಿಕೆ ಉತ್ತರ ಕೊಡುತ್ತಿದ್ದಾರೆ. ಈ ಕಾರಣಗಳಿಂದ ಈ ಬಾರಿಯ ಶ್ರಾವಣ ಉತ್ಸವವನ್ನು ರದ್ದುಗೊಳಿಸಲು ಟ್ರಸ್ಟ್ ತೀರ್ಮಾನಿಸಿ ರುವದಾಗಿ ಲಲಿತ ಹೇಳಿದರು.

ದೇವಾಲಯದ ಅರ್ಚಕ ರಾಮು ಹಾಗೂ ಆತನ ಮಗನ ಉಡಾಫೆಯಿಂದ ದೇವಾಲಯದಲ್ಲಿ ವ್ಯವಸ್ಥಿತ ಬದಲಾವಣೆಯಾಗುವ ತನಕ ಯಾವದೇ ಉತ್ಸವವನ್ನು ನಡೆಸಲಾಗುವದಿಲ್ಲ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ರಾಮುವಿನ ಮೇಲೆ ಎರಡು ಬಾರಿ ದೂರು ನೀಡಲಾಗಿದೆ. ಜಿಲ್ಲಾ ಪೊಲೀಸ್ ಉನ್ನತಾಧಿಕಾರಿಗೂ ದೂರು ನೀಡಲಾಗಿದೆ. 2002ರಿಂದಲೇ ಉತ್ತಮ ರೀತಿಯಲ್ಲಿ ವ್ಯವಸ್ಥಿತವಾಗಿ ನಡೆಸಿಕೊಂಡು ಬಂದಿರುವ ಈ ಶ್ರೀಮೂಲ ಶನೀಶ್ವರ ದೇವಾಲಯಕ್ಕೆ ಚ್ಯುತಿ ಬರುವ ರೀತಿಯಲ್ಲಿ ಅರ್ಚಕ ರಾಮು ಹಾಗೂ ಅವರ ಮಗ ಮಲ್ಲಪ್ಪ ನಡೆದುಕೊಳ್ಳುತ್ತಿದ್ದಾರೆ. ದೇವಾಲಯದ ಅತ್ಯುನ್ನತ ವ್ಯವಸ್ಥೆಗೆ ಮಸಿ ಬಳಿಯವದು ಈ ಇಬ್ಬರಿಗೂ ಶೋಭೆ ತರುವಂತದಲ್ಲ. ಇದು ಖಂಡನೀಯ ಎಂದು ಟ್ರಸ್ಟ್‍ನ ಗೌರವ ಅಧ್ಯಕ್ಷ ಪಿ.ಜಿ.ಪ್ರಕಾಶ್ ಹೇಳಿದರು.

ಗೋಷ್ಠಿಯಲ್ಲಿ ಗೌರವ ಕಾರ್ಯದರ್ಶಿ ಎ.ಪಿ.ಪೂಣಚ್ಚ, ಎಂ.ಎನ್.ಉತ್ತಪ್ಪ, ಡಿ.ಎಂ.ವಿಠಲ ಪೆಮ್ಮಯ್ಯ, ಕೆ.ಕೆ.ಶರೀನ್ ಪೆಮ್ಮಯ್ಯ, ಎಂ.ಎಸ್. ಮನೋಜ್ ಕುಮಾರ್, ಕೆ.ಎಸ್. ಕಾವೇರಪ್ಪ ಮತ್ತಿತರರು ಉಪಸ್ಥಿತರಿದ್ದರು.