ಶನಿವಾರಸಂತೆ, ಅ. 1: ಕಾಫಿ ಬೆಳೆಗಾರರು ಜನಸಾಮಾನ್ಯರ ಮಟ್ಟಕ್ಕೆ ಕಾಫಿಯನ್ನು ತರುವ ನಿಟ್ಟಿನಲ್ಲಿ ಚಿಂತನೆ ಮಾಡಬೇಕಾಗಿದೆ ಎಂದು ಜಾಗೇನಹಳ್ಳಿಯ ಬೆಳೆಗಾರ ಮಲತ್ತೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ ವತಿಯಿಂದ ಶನಿವಾರ ನಡೆದ ಅಂತರ್ರಾಷ್ಟ್ರೀಯ ಕಾಫಿ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಾಮಾನ್ಯರನ್ನು ತಲಪುವಲ್ಲಿ ಕಾಫಿ ಮಂಡಳಿ ವಿಫಲವಾಗಿದೆ. ಚಿಕೋರಿಯ ಅಧಿಕ ಬಳಕೆಯಿಂದ ಕಾಫಿಯ ಗುಣಮಟ್ಟ ಕಳಪೆಯಾಗಿದೆ. ಬೆಳೆಗಾರರ ಸಂಘದ ವತಿಯಿಂದ ಚಿಕೋರಿ ಬಳಕೆಗೆ ಕಡಿವಾಣ ಹಾಕಿ ಕಾಫಿ ಗುಣಮಟ್ಟ ಹೆಚ್ಚಿಸಿ ಮಾರಾಟ ಮಾಡುವ ವ್ಯವಸ್ಥೆ ಮಾಡಬೇಕು ಎಂದರು.
ಬೆಳೆಗಾರ ಕುಮಾರ್ ಮಾತನಾಡಿ ದೇಶೀಯವಾಗಿ ಬೇಡಿಕೆ ಕಡಿಮೆಯಿರುವ ಕಾಫಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಹೆಚ್ಚಾಗಿದೆ. ಬೆಳೆಗಾರರ ಸಹಕಾರ ಮುಖ್ಯವಾಗಿದ್ದು, ವಿವಿಧ ಸಮಾರಂಭಗಳಲ್ಲಿ, ಉತ್ಸವಗಳಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದರು.
ಕಾಫಿ ಮಂಡಳಿ ಸಂಪರ್ಕಾಧಿಕಾರಿ ಮುರಳೀಧರ್ ಮಾತನಾಡಿ, ಕಾಫಿ ಕುಡಿಯುವ ದೇಶಗಳಲ್ಲಿ ಭಾರತ 164ನೇ ಸ್ಥಾನದಲ್ಲಿದೆ. ಇದಕ್ಕೆ ಅಜ್ಞಾನವೇ ಕಾರಣ. ಉತ್ತಮ ಪೇಯ ಕಾಫಿ ಸೇವನೆಯಿಂದ ಆತ್ಮಹತ್ಯೆ ಮನೋಭಾವ ದೂರವಾಗುತ್ತದೆ. ಹೃದಯಾಘಾತ, ನರದೌರ್ಬಲ್ಯ, ಡಯಾಬಿಟಿಸ್ ಕಾಯಿಲೆಗಳಿಗೆ ಉತ್ತಮ ಔಷಧಿ ಕಾಫಿ ಎಂದರು.
ಬೆಳೆಗಾರರಾದ ವಿಜೇಂದ್ರ, ಬಿ.ಎಸ್. ಅನಂತಕುಮಾರ್, ಭರತ್‍ಕುಮಾರ್, ಡಿ.ಬಿ. ಧರ್ಮಪ್ಪ, ಕಿಶೋರ್, ಕಾಫಿ ಹಾಗೂ ಕಾಫಿ ದಿನಾಚರಣೆ ಮಹತ್ವದ ಕುರಿತು ಮಾತನಾಡಿದರು.
ಬೆಳೆಗಾರ ಎನ್.ಬಿ. ನಾಗಪ್ಪ ಸಮಾರಂಭ ಉದ್ಘಾಟಿಸಿದರು. ಶನಿವಾರಸಂತೆ ಹೋಬಳಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷ್ಮಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಎಸ್.ಕೆ. ವೀರಪ್ಪ, ಎನ್.ಕೆ. ಅಪ್ಪಸ್ವಾಮಿ, ಡಿ.ಪಿ. ಬೋಜಪ್ಪ, ಹೆಚ್.ಪಿ. ಶೇಷಾದ್ರಿ, ಮಹಮದ್ ಗೌಸ್, ಸಿ.ಜೆ. ಗಿರೀಶ್, ಸಂದೀಪ್, ಮುಸ್ತಾಫ್, ಧರ್ಮಚಾರಿ ಗುಂಡೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಬೆಳೆಗಾರರು ಗುಡುಗಳಲೆ ವೃತ್ತದಿಂದ ಪಟ್ಟಣದ ಮುಖ್ಯ ಬೀದಿಯಲ್ಲಿ ರ್ಯಾಲಿ ನಡೆಸಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡರು.
ರೈತ ಗೀತೆಯೊಂದಿಗೆ ಆರಂಭವಾದ ಕಾರ್ಯಕ್ರಮ ಮುಕ್ತಾಯದವರೆಗೂ ಸಾರ್ವಜನಿಕರಿಗೆ ರುಚಿಕರ ಕಾಫಿಯನ್ನು ವಿತರಿಸಲಾಯಿತು. ಬೆಳೆಗಾರ ಮಲ್ಲೇಗೌಡ ಸ್ವಾಗತಿಸಿದರು. ಬೆಳೆಗಾರ ಹೂವಯ್ಯ ನಿರೂಪಿಸಿ, ವಂದಿಸಿದರು.