ಒಡೆಯನಪುರ, ನ. 14: ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಾಹರ್ಲಾಲ್ ನೆಹರು ಅವರ 127ನೇ ಹುಟ್ಟುಹಬ್ಬದ ಪ್ರಯುಕ್ತವಾಗಿ ಸಂಭ್ರಮದಿಂದ ಮಕ್ಕಳ ದಿನಾಚರಣೆಯನ್ನು ಸಮಿಪದ ಶನಿವಾರಸಂತೆ ಶ್ರೀ ವಿಘ್ನೇಶ್ವರ ಬಾಲಕಿಯರ ವಿದ್ಯಾಸಂಸ್ಥೆಯ ಮಕ್ಕಳು ಸೋಮವಾರ ಅದ್ದೂರಿಯಾಗಿ ಆಚರಿಸಿದರು. ವಿದ್ಯಾಸಂಸ್ಥೆಯ ಬಾಲಕಿಯರೇ ನಡೆಸಿಕೊಟ್ಟ ಮಕ್ಕಳ ದಿನಾಚರಣೆಯ ಸಮಾರಂಭವನ್ನು ವಿದ್ಯಾಸಂಸ್ಥೆಯ ವಿದ್ಯಾರ್ಥಿ ನಾಯಕಿ ಅಶ್ವಿನಿ ಉದ್ಘಾಟಿಸಿದರು. ನಂತರ ಮಾತನಾಡಿದ ಅಶ್ವಿನಿ-ಮಕ್ಕಳು ದೇಶದ ಭಾವಿ ಭವಿಷ್ಯಗಳಾಗಿರುವ ಉದ್ದೇಶದಿಂದ ಚಾಚಾ ನೆಹರು ಅವರು ಹುಟ್ಟಿದ ದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ದೇಶದಾದ್ಯಂತ ಆಚರಿಸಲಾಗುತ್ತಿದೆ, ಚಾಚಾ ನೆಹರು ಅವರಲ್ಲಿ ಮಕ್ಕಳ ಮೇಲಿದ್ದ ಪ್ರೀತಿ ಮಕ್ಕಳ ಭವಿಷ್ಯದ ಸಂಕೇತವಾಗಿದೆ, ನೆಹರು ಅವರು ಹುಟ್ಟಿದ ಹಬ್ಬವನ್ನು ನಾವು ಕೇವಲ ಮಕ್ಕಳ ದಿನಾಚರಣೆಯನ್ನಾಗಿ ಆಚರಿಸಿದರೆ ಮಾತ್ರ ಸಾಲದು, ದೇಶಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟ ಅನೇಕ ಮಹನೀಯರುಗಳಲ್ಲಿ ಮಹಾತ್ಮ ಗಾಂದಿಜೀ ಹಾಗೂ ಚಾಚಾ ನೇಹರು ಮುಂಚೂಣಿಯಲ್ಲಿದ್ದವರು, ಇದನ್ನು ಗಮನದಲ್ಲಿಟ್ಟುಕೊಳ್ಳುವ ಮಕ್ಕಳು ನೇಹರು ಅವರಲ್ಲಿ ಮಕ್ಕಳ ಮೇಲಿದ್ದ ಪ್ರೀತಿ, ನಂಬುಗೆ, ವಿಶ್ವಾಸವನ್ನು ಉಳಿಸಿಕೊಳ್ಳುವದು ಮಕ್ಕಳ ಕರ್ತವ್ಯವಾಗಿದೆ ಎಂದರು.
ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಆಯಿಷಾಬಾನು ಮಾತನಾಡಿ, ಮಕ್ಕಳ ದಿನಾಚರಣೆ ಮಾಡುವದರಿಂದ ಮಕ್ಕಳಲ್ಲಿ ದೇಶಭಕ್ತಿ ಹೆಚ್ಚಾಗುತ್ತದೆ, ಮಕ್ಕಳ ದಿನಾಚರಣೆಗೆ ಪ್ರೇರಣೆಯಾದ ಜವಾಹರಲಾಲ್ ನೇಹರು ಅವರ ಬಗ್ಗೆ ಪ್ರೀತಿ, ಗೌರವ, ಭಕ್ತಿ ಭಾವನೆಯೂ ಪ್ರತಿಯೊಂದು ಮಕ್ಕಳ ಮನಸ್ಸಿನಲ್ಲಿ ಮೂಡುತ್ತದೆ. ನೆಹರು ಅವರಲ್ಲಿದ್ದ ಮಕ್ಕಳ ಬಗ್ಗೆ ಕಾಳಜಿ, ಪ್ರೀತಿಯ ಮನೋಭಾವನೆಯನ್ನು ನಾವು ಅರಿತುಕೊಳ್ಳಬೇಕು, ಈ ದಿಸೆಯಲ್ಲಿ ವಿದ್ಯಾರ್ಥಿ ಸಮೂಹ ಸಮಾಜದಲ್ಲಿ ಪ್ರೀತಿ, ವಿಶ್ವಾಸ, ಜವಾಬ್ದಾರಿಯುತವಾಗಿ ನಡೆದು ಕೊಂಡರೆ ಮಕ್ಕಳ ದಿನಾಚರಣೆಗೆ ಅರ್ಥಸಿಗುತ್ತದೆ ಎಂದರು.
ಪ್ರಾಥಮಿಕ ಶಾಲಾ ವಿಭಾಗದ ಬಾಲಕ ಸುಮುಖ್ ಮಾತನಾಡಿ, ಪಂಡಿತ್ ಚಾಚಾ ನೆಹರು ಅವರಿಗೆ ಮಕ್ಕಳಲ್ಲಿ ಅತೀವ ಪ್ರೀತಿ ಇತ್ತು. ಈ ಕಾರಣಕ್ಕಾಗಿ ಅವರ ಹುಟ್ಟು ಹಬ್ಬವನ್ನು ನೆನಪಿಸುವ ಸಲುವಾಗಿ ಮಕ್ಕಳ ದಿನಾಚರಣೆಯನ್ನು ಆಚರಿಸುತ್ತಿದ್ದೇವೆ, ನೆಹರು ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿಯನ್ನು ಸಕಾರಗೊಳಿಸಬೇಕಾದರೆ ನಾವು ಸಮಾಜದಲ್ಲಿ ಶಾಂತಿ, ನೆಮ್ಮದಿಯಂತಹ ಮೌಲ್ಯಗಳನ್ನು ಹಿರಿಯರಿಂದ ಕಲಿತುಕೊಂಡು ಭವಿಷ್ಯದಲ್ಲಿ ಪ್ರೀತಿ ವಿಶ್ವಾಸದಿಂದ ಸಮಾಜವನ್ನು ಮುನ್ನಡೆಸಿದರೆ ಮಾತ್ರ ನೆಹರು ಅವರಿಗೆ ಮಕ್ಕಳ ಮೇಲಿದ್ದ ಪ್ರೀತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ವಿದ್ಯಾರ್ಥಿನಿ ಶರಣ್ಯ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ವಿದ್ಯಾರ್ಥಿನಿಯರಾದ ಶಮಿನಾಬಾನು, ರಕ್ಷಿತಾ, ಸ್ಮಿತ, ಗಣ್ಯ, ಆಯಿಷ, ಅಶ್ವಿನಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಮಣಿ, ವಿದ್ಯಾಸಂಸ್ಥೆ ಕಾರ್ಯದರ್ಶಿ ಬೆಳ್ಳಿಯಪ್ಪ, ನಿರ್ದೇಶಕರಾದ ನಿತ್ಯನಿಧಿ, ಗೋವಿಂದಗೌಡ, ದೇವರಾಜೇಗೌಡ, ಕಾಲೇಜು ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್ ಮುಂತಾದವರಿದ್ದರು.
ಈ ಸಂದರ್ಭದಲ್ಲಿ ಮಕ್ಕಳ ಪೋಷಕರಿಗೆ ವಿವಿಧ ಕ್ರೀಡಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ವಿದ್ಯಾಸಂಸ್ಥೆಯ ಮಕ್ಕಳಿಂದ ವಿವಿಧ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.