ಗೋಣಿಕೊಪ್ಪ, ಜೂ. 19: ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳತ್ತೋಡು ನಿವಾಸಿ ಚಪ್ಪಂಡ ಅಕ್ಕಮ್ಮನವರ ಮನೆಗೆ ಶತಮಾನ ಕಳೆದರೂ ವಿದ್ಯುತ್ ಸಂರ್ಪಕವಿಲ್ಲದೆ ಬದುಕುತ್ತಿದ್ದು, ಈಗ ಜಿ.ಪಂ. ಸದಸ್ಯ ಚಿಯಕ್ಪೂವಂಡ ಬೋಪಣ್ಣ ಅವರ ಮುತುವರ್ಜಿಯಿಂದ ಸಂಪರ್ಕ ಕಲ್ಪಿಸುವ ಪ್ರಕ್ರಿಯೆ ನಡೆಯುತ್ತಿದೆ.
ವೀರಾಜಪೇಟೆ ಮುಖ್ಯರಸ್ತೆಯಿಂದ ಅರ್ಧ ಕಿ.ಮೀ. ದೂರದಲ್ಲಿ ಚಪ್ಪಂಡ ಕುಟುಂಬ ನೂರಾರು ವರ್ಷಗಳಿಂದ ಬದುಕುತ್ತಿದ್ದು ಇವರ ದೊಡ್ಡ ಮನೆಯೂ ಸಹ ಇಲ್ಲೆ ಇದೆ. ಇದರ ಹತ್ತಿರದಲ್ಲೇ ಪುಟ್ಟ ಮನೆಯಲ್ಲಿ ತನ್ನ ತಂಗಿ ಪಾರ್ವತಿಯೊಂದಿಗೆ ವಾಸಿಸುತ್ತಿರುವ ಚಪ್ಪಂಡ ಅಕ್ಕಮ್ಮನವರ ಮನೆಗೆ ಸ್ವಾತಂತ್ರ್ಯ ಕಳೆದು 69 ವರ್ಷ ಕಳೆದರೂ ವಿದ್ಯುತ್ ಸಂಪರ್ಕ ಇಲ್ಲದೆ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ. ಸ್ವತಂತ್ರ ಭಾರತದಲ್ಲಿ ಪ್ರತಿ ಹಳ್ಳಿಗಳನ್ನು ಕತ್ತಲೆ ಮುಕ್ತ ಮಾಡಲು ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ತಂದು ಜನರಿಗೆ ಬೆಳಕಿನ ಭಾಗ್ಯ ನೀಡುತ್ತಿದ್ದರು, ಆದರೆ ಈ ಕುಟುಂಬಕ್ಕೆ ವಿದ್ಯುತ್ ಭಾಗ್ಯ ಮರೀಚಿಕೆಯಾಗೇ ಉಳಿದುಕೊಂಡಿದೆ.
ಅಕ್ಕಮ್ಮ ತನ್ನ ಗಂಡ ಮತ್ತು ಮಗನನ್ನು ಕಳೆದುಕೊಂಡರೂ ಇದೇ ಮನೆಯಲ್ಲಿ ವಾಸಿಸುತ್ತಿದ್ದು, ಕಳೆದ ಹಲವು ವರ್ಷಗಳಿಂದಲೇ ಹಾತೂರು ಗ್ರಾಮ ಪಂಚಾಯಿತಿಗೆ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಸಲ್ಲಿಸಿದರು, ಬಂದು ಹೋದ ಸಾಕಷ್ಟು ಜನಪ್ರತಿನಿಧಿಗಳು ಭರವಸೆಯಲ್ಲೇ ಕಾಲ ಕಳೆದರು. ಪಂಚಾಯಿತಿಯಿಂದ ಯಾವದೇ ರೀತಿಯಲ್ಲಿ ಸಹಕಾರ ದೊರೆಯಲಿಲ್ಲ. ಬದಲಿಗೆ ನಮ್ಮಲ್ಲಿ ಯಾವದೇ ಯೋಜನೆ ಇಲ್ಲ ಎಂಬ ಉತ್ತರ ನೀಡಲಾಗಿದೆ. ಈ ಸಾಲಿನಲ್ಲಿ ಹಾತೂರು ಗ್ರಾ.ಪಂ.ಗೆ ಆಯ್ಕೆಯಾದ ಕೇಳಪಂಡ ರೇಖಾ ಅವರಲ್ಲಿ ಅಕ್ಕಮ್ಮ ಈ ವಿಷಯ ಪ್ರಸ್ತಾಪಿಸಿದಾಗ ಕೂಡಲೇ ಸ್ಪಂದಿಸಿದ ಇವರು ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ ಅವರಿಗೆ ಮಾಹಿತಿ ನೀಡಿದ್ದು, ಇವರು ಕೂಡಲೇ ಸ್ಥಳಕ್ಕಾಗಮಿಸಿ ಪರಿಶೀಲನೆ ಮಾಡಿ, ಗೋಣಿಕೊಪ್ಪಲು ಕೆ.ಇ.ಬಿ. ಕಚೇರಿಗೆ ಆಗಮಿಸಿ ಎ.ಇ.ಇ. ಅಂಕಯ್ಯ ಅವರಲ್ಲಿ ವಿಷಯ ತಿಳಿಸಿದ್ದಾರೆ. ಕೂಡಲೇ ಸ್ಪಂದಿಸಿದ ಇವರು ದೀನದಯಾಳ್ ಉಪಾಧ್ಯಾಯ ಯೋಜನೆ ಅಡಿಯಲ್ಲಿ ವಿದ್ಯುತ್ ಸಂಪರ್ಕಕ್ಕೆ ಅರ್ಜಿ ಪಡೆದು, ಕ್ರಮ ಕೈಗೊಂಡಿದ್ದಾರೆ. ಈ ಸಂದರ್ಭ ಇವರ ಸಹಾಯಕ್ಕೆ ಆಗಮಿಸಿದ ಗೋಣಿಕೊಪ್ಪಲು ಗುತ್ತಿಗೆದಾರ ವೆಂಕಟೇಶ್ ವಿ.ವಿ.ಕೆ. ಎಲೆಟ್ಟ್ರಾನಿಕ್ಸ್ ಅವರು ಕೆಲಸವನ್ನು ಉಚಿತವಾಗಿ ಮಾಡಿಕೊಡುವದಾಗಿ ತಿಳಿಸಿದ್ದು, ಇದಕ್ಕೆ ಸಂಬಂಧಪಟ್ಟ ಸಾಮಗ್ರಿಯನ್ನು ಸಿ.ಕೆ. ಬೋಪಣ್ಣ ನೀಡುವದಾಗಿ ತಿಳಿಸಿದ್ದಾರೆ.
ಅಂತೂ ಶತಮಾನಗಳಿಂದ ವಿದ್ಯುತ್ ಇಲ್ಲದೇ ವಾಸಿಸುತ್ತಿದ್ದ ಒಂದು ಬಡ ಕುಟುಂಬಕ್ಕೆ ಸಮಯದಲ್ಲಿ ನೆರವಾಗಿ ಅವರ ಮುಖದಲ್ಲಿ ಮಂದಹಾಸ ಬೀರುವಂತೆ ಮಾಡಿದ ಪ್ರತಿಯೊಬ್ಬರು ಅಭಿನಂದನಾರ್ಹರು.