ಮಡಿಕೇರಿ, ಜ. 17: ಹೊಸಬರು ಇಂದು ವ್ಯಾಪಾರದಲ್ಲಿ ತೊಡಗಿ ಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ವ್ಯಾಪಾರಿಗಳ ಪೀಳಿಗೆ ವ್ಯಾಪಾರದಲ್ಲಿ ತೊಡಗದಿರುವದು ವಿಷಾದನೀಯ ಎಂದು ಬೆಂಗಳೂರು ಎಫ್‍ಕೆಸಿಸಿಐನ ಉಪಾಧ್ಯಕ್ಷ ಎಸ್. ಸುಧಾಕರ ಶೆಟ್ಟಿ ಬೇಸರ ವ್ಯಕ್ತಪಡಿಸಿದರು.ನಗರದ ಕಾವೇರಿ ಹಾಲ್‍ನಲ್ಲಿ ನಡೆದ ಕೊಡಗು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ಯುವ ಜನತೆ ನಿರಾಸೆ ಮತ್ತು ಜಿಗುಪ್ಸೆಯನ್ನು ಬಿಟ್ಟು ವ್ಯಾಪಾರದಲ್ಲಿ ತೊಡಗಿಕೊಳ್ಳಬೇಕಾಗಿದೆ. ವ್ಯಾಪಾರೋ ದ್ಯಮಗಳಿಗೆ ಸಾಲ ಪಡೆಯುವಾಗ ಸರಿಯಾದ ಯೋಜನಾ ವರದಿಯನ್ನು ತಯಾರಿಸಿ ಹಣಕಾಸು ಸಂಸ್ಥೆಗಳಿಗೆ ಸಲ್ಲಿಸಿದಲ್ಲಿ ಉತ್ತಮ ಉದ್ಯಮಿ ಯಾಗುತ್ತಾನೆ ಎಂದು ಕಿವಿಮಾತು ಹೇಳಿದ ಅವರು, ಗುರಿ ಮುಟ್ಟುವತನಕ ಛಲ, ಕಠಿಣ ಪರಿಶ್ರಮ ಪಡುವ ಅಗತ್ಯವಿದೆ ಎಂದು ಸ್ವಾಮಿ ವಿವೇಕಾ ನಂದರ ಮಾತನ್ನು ಉಚ್ಛರಿಸಿದರು.

ರಾಜ್ಯ ಸರ್ಕಾರಕ್ಕೆ ಎಫ್‍ಕೆಸಿಸಿಐ ದೊಡ್ಡ ಆದಾಯ ಸಲ್ಲಿಸುವ ಸಂಸ್ಥೆಯಾಗಿದ್ದು, ಬಜೆಟ್ ಸಂದರ್ಭದಲ್ಲಿ ಸಂಸ್ಥೆಯ ಸಲಹೆಯನ್ನು ಸರ್ಕಾರಗಳು ಕೇಳುತ್ತಿವೆ. ರಾಜ್ಯದಲ್ಲಿ 30 ಲಕ್ಷ ವ್ಯಾಪಾರಿಗಳಿದ್ದು, 6 ಸಾವಿರ ಕೈಗಾರಿಕೆಗಳಿವೆ ಎಂದರು.

ಕೊಡಗು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಪ್ರಕೃತಿಯ ನಿರ್ವಹಣೆಯೊಂದಿಗೆ ವ್ಯಾಪಾರಕ್ಕೆ ಪ್ರೋತ್ಸಾಹ ಅಗತ್ಯ. ಸ್ವಂತ ಊರಿನಲ್ಲಿಯೇ

(ಮೊದಲ ಪುಟದಿಂದ) ವ್ಯಾಪಾರ ಮಾಡುವದರಿಂದ ವ್ಯಾಪಾರ ಮಾರುಕಟ್ಟೆ ಲಭ್ಯವಾಗುತ್ತದೆ ಎಂದ ಸುಧಾಕರ್ ಶೆಟ್ಟಿ ಯುವ ಜನತೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳದೇ ನಿರಾಸೆ ಹೊಂದದೆ ವ್ಯಾಪಾರದಲ್ಲಿ ತೊಡಗಿದಾಗ ಯಶಸ್ಸು ಸಿಗುತ್ತದೆ ಎಂದು ಹೇಳಿದರು.

ಬೆಂಗಳೂರು ಕೆಎಸ್‍ಐಐಡಿಬಿ ಅಧ್ಯಕ್ಷ ಸಿ.ಎಂ. ಧನಂಜಯ ಮಾತನಾಡಿ, ಸಂಸ್ಥೆಯ ವತಿಯಿಂದ ನಾಲ್ಕು ಯೋಜನೆಯನ್ನು ಸಾಧಿಸುವ ಗುರಿ ಹೊಂದಲಾಗಿದೆ. ಮೊದಲನೆಯದಾಗಿ ಸಮುದ್ರ ನೀರನ್ನು ಶುದ್ಧೀಕರಿಸಿ ಬೆಂಗಳೂರು ಮಹಾನಗರದಲ್ಲಿ ಉಪಯೋಗಿಸಲು ಅನುಕೂಲ ಕಲ್ಪಿಸುವದು, ಎರಡನೆಯದಾಗಿ ಕೊಡಗು ಜಿಲ್ಲೆಯಲ್ಲಿಯೂ ನೀರಿನ ಅಭಾವವಿದೆ ಎಂದು ಕೇಳಿಪಟ್ಟಿದೆ. ಇಲ್ಲಿನ ಹೊಳೆಗಳಿಗೆ ಅಣೆಕಟ್ಟು ಹಾಗೂ ಟ್ಯಾಂಕ್ ನಿರ್ಮಾಣ ಮಾಡಿ ನೀರಿನ ಸಮಸ್ಯೆ ನೀಗಿಸಲು ಸರ್ಕಾರದ ಅನುದಾನದೊಂದಿಗೆ ವ್ಯವಸ್ಥೆ ಮಾಡುವದು, ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಗುರಿಹೊಂದಿದ್ದು, ಈ ಹಿಂದೆಯೇ ಜಾಗ ಗುರುತಿಸಲಾಗಿತ್ತು. ಆದರೆ ಅದಕ್ಕೆ ತಡೆಯಾಗಿದ್ದು, ಸ್ಥಳೀಯ ಜನಪ್ರತಿನಿಧಿಗಳು, ಸಂಘ - ಸಂಸ್ಥೆಗಳು ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿ ಜಾಗ ಒದಗಿಸಿದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸಲಾಗುವದು, ಕೈಗಾರಿಕಾ ಬಡಾವಣೆ ನಿರ್ಮಾಣ ಮಾಡುವ ಉದ್ದೇಶವಿದ್ದು, ಅದಕ್ಕೂ ಜಾಗದ ಅವಶ್ಯಕತೆ ಇದೆ ಅಲ್ಲದೆ ಜಿಲ್ಲೆಯಲ್ಲಿ ಕಸ ವಿಲೇವಾರಿ ಸಮಸ್ಯೆಯಿದ್ದು, ಕಸ ವಿಲೇವಾರಿ ಘಟಕ ಸ್ಥಾಪಿಸುವ ಉದ್ದೇಶವಿದೆ. ಸ್ಥಳೀಯ ಜನಪ್ರತಿನಿಧಿಗಳು, ಕೆಡಿಸಿಸಿಐ ಇತರ ಸಂಘ - ಸಂಸ್ಥೆಗಳು ಹಾಗೂ ತಾನು ಸೇರಿದಂತೆ ಜಿಲ್ಲಾಧಿಕಾರಿಯೊಂದಿಗೆ ಚರ್ಚಿಸಿ ಅನುಷ್ಠಾನ ತರಬಹುದು. ಜಾಗ ಗುರುತಿಸಿ ಎಂದು ಹೇಳಿದ ಧನಂಜಯ ಅವರು ಸಂಸ್ಥೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ವೇದಿಕೆಯಲ್ಲಿ ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ಅಧ್ಯಕ್ಷ ಪಿ.ಸಿ. ಫರೀದಾ, ಸುವರ್ಣ ಸಂಭ್ರಮ ಆಚರಣೆ ಸಮಿತಿ ಅಧ್ಯಕ್ಷ ಮತ್ತು ಕೆಡಿಸಿಸಿಐ ಮಾಜಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ, ಕೆಡಿಸಿಸಿಐ ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್, ಉಪಾಧ್ಯಕ್ಷರಾದ ಎಂ.ಇ. ಹನೀಫ್, ಬಿ.ಆರ್. ನಾಗೇಂದ್ರ ಪ್ರಸಾದ್, ಸಂಘಟನಾ ಕಾರ್ಯದರ್ಶಿ ನವೀನ್ ಅಂಬೆಕಲ್, ಬಿ.ಆರ್. ಪ್ರಮೋದ್, ನಿರ್ದೇಶಕರಾದ ಕೆ.ಎಂ. ಗಣೇಶ್, ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್, ಕೊಡಗು ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣೇಗೌಡ, ಮೈಸೂರು ಚೇಂಬರ್ ಆಫ್ ಕಾಮರ್ಸ್‍ನ ಕಾರ್ಯದರ್ಶಿ ರಾಮಣ್ಣ ಹಾಗೂ ಇನ್ನಿತರರು ಇದ್ದರು.

ಕೆಡಿಸಿಸಿಐ ಸಂಘಟನಾ ಕಾರ್ಯದರ್ಶಿ ಎಂ.ಪಿ. ಕೇಶವ ಕಾಮತ್ ಕಾರ್ಯಕ್ರಮ ನಿರೂಪಿಸಿ, ಖಜಾಂಚಿ ಎ.ಎನ್. ರವಿ ಉತ್ತಪ್ಪ ಸ್ವಾಗತಿಸಿದರು.