ಸುಂಟಿಕೊಪ್ಪ, ಡಿ. 8: ಮನೆಯಿಂದ ತೆರಳಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾದ ಘಟನೆ ಸಮೀಪದ ಕಾಂಡನಕೊಲ್ಲಿ ತೋಟದಲ್ಲಿ ನಡೆದಿದೆ.

ಬಹ್ಮಾಂಬರ ಕಾಫಿ ತೋಟದಲ್ಲಿ ಶವ ಪತ್ತೆಯಾಗಿದ್ದು, ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ.

ಪಾಪ್ಲಿಕಾಡ್ ತೋಟದ ಲೈನ್ ಮನೆಯಲ್ಲಿ ವಾಸವಾಗಿರುವ ಕಾರ್ಮಿಕ ಪುಕ್ಕ ಎಂಬವರ ಪುತ್ರ ಕಾರ್ಮಿಕ ವಿಜಯ (30) ಎಂಬಾತ ಶನಿವಾರ ಸಂಜೆ ಮನೆಯಿಂದ ಕಾಂಡನಕೊಲ್ಲಿಗೆ ತೆರಳುವದಾಗಿ ತೆರಳಿದ್ದು, ಮನೆಗೆ ಮರಳದೆ 5 ದಿನಗಳ ಬಳಿಕ ಕಾಂಡನಕೊಲ್ಲಿಯ ಕಾಫಿ ತೋಟದ ಕಾಫಿ ಗಿಡದ ಬುಡದಲ್ಲಿ ಕೊಳೆತ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯ ನಿವಾಸಿಗಳು ಸುಂಟಿಕೊಪ್ಪ ಪೊಲೀಸರಿಗೆ ದೊರೆತ ಮಾಹಿತಿ ಹಿನ್ನೆಲೆ ಸುಂಟಿಕೊಪ್ಪ ಠಾಣಾಧಿಕಾರಿ ಅನೂಪ್ ಮಾದಪ್ಪ ಹಾಗೂ ಸಿಬ್ಬಂದಿಗಳು ತೆರಳಿ ಮೃತ ದೇಹವನ್ನು ಪರಿಶೀಲಿಸಿ ಮಹಜರು ನಡೆಸಿ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆಗೆ ಕ್ರಮ ಕೈಗೊಂಡಿದ್ದಾರೆ.

ಮೃತ ಶರೀರವನ್ನು ಕುಶಾಲನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.