ಕುಶಾಲನಗರ, ಸೆ. 17: ಹೋಂಸ್ಟೇಯಲ್ಲಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಆರೋಪದ ಹಿನ್ನಲೆಯಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ತುರುವೇಕೆರೆ ಶಾಸಕರ ಪುತ್ರ ರಾಜೀವ್ ಸೇರಿದಂತೆ ನಾಲ್ವರು ಆರೋಪಿಗಳಿಗೆ ಕುಶಾಲನಗರ ಜೆಎಂಎಫ್ಸಿ ನ್ಯಾಯಾಲಯ ಷರತ್ತು ಬದ್ದ ಜಾಮೀನು ನೀಡಿ ಆದೇಶ ಹೊರಡಿಸಿದೆ.
ತಾ. 11 ರಂದು ಕುಶಾಲನಗರ ಸಮೀಪ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಹೋಂಸ್ಟೇ ಒಂದಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸರು ಧಾಳಿ ನಡೆಸಿದ ಸಂದರ್ಭ ವೇಶ್ಯಾವಾಟಿಕೆ ಆರೋಪದಡಿಯಲ್ಲಿ ತುರುವೇಕೆರೆ ಶಾಸಕ ಕೃಷ್ಣಪ್ಪ ಅವರ ಪುತ್ರ ರಾಜೀವ್ ಸೇರಿದಂತೆ ಸೋಮವಾರಪೇಟೆಯ ಮಧು, ಪ್ರಮೋದ್ ಹಾಗೂ ಹೋಂಸ್ಟೇ ಮಾಲೀಕ ಪ್ರಸನ್ನ ಎಂಬವರುಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ಈ ಸಂದರ್ಭ ರೂ. 30 ಸಾವಿರ ನಗದು ಹಾಗೂ ಒಂದು ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಇಂದು ಕುಶಾಲನಗರ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬಂದಿದ್ದು ಎಲ್ಲಾ 4 ಮಂದಿ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಲಾಗಿದೆ.
ನ್ಯಾಯಾಲಯದ ಆವರಣದಲ್ಲಿ ಶಾಸಕರ ಪುತ್ರನ ಸ್ನೇಹಿತರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ತುರುವೇಕೆರೆ ಭಾಗದಿಂದ ಪಂಚಾಯಿತಿ ಸೇರಿದಂತೆ ಹಲವು ಜನಪ್ರತಿನಿಧಿಗಳು ಕೂಡ ಆಗಮಿಸಿದ್ದ ದೃಶ್ಯ ಕಂಡುಬಂತು.