ಸೋಮವಾರಪೇಟೆ, ಜ. 23 : ಹಲವು ದಶಕಗಳ ಬೇಡಿಕೆಯಾದ ಸೋಮವಾರಪೇಟೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರುಗಳ ವಸತಿ ಗೃಹ ನಿರ್ಮಾಣಕ್ಕೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಆರೋಗ್ಯ ಪದ್ದತಿ ಅಭಿವೃದ್ಧಿ ಹಾಗೂ ಸುಧಾರಣಾ ಯೋಜನೆಯಡಿ ಬಿಡುಗಡೆಯಾಗಿ ರುವ ರೂ. 1.20 ಕೋಟಿ ವೆಚ್ಚದ ವಸತಿ ನಿಲಯ ಕಾಮಗಾರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.
ವೈದ್ಯರ ವಸತಿ ನಿಲಯಕ್ಕೆ 1.20 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಎರಡು ಅಂತಸ್ತಿನ ಕಟ್ಟಡದಲ್ಲಿ ನಾಲ್ಕು ವಸತಿ ಗೃಹ ನಿರ್ಮಾಣವಾಗಲಿದೆ. ಕಾಮಗಾರಿ ಪೂರ್ಣಗೊಳಿಸಲು 15 ತಿಂಗಳ ಕಾಲಾವಕಾಶವನ್ನು ಗುತ್ತಿಗೆದಾರರಿಗೆ ನೀಡಲಾಗಿದ್ದು, ಗುಣಮಟ್ಟದ ಕಾಮಗಾರಿಯೊಂದಿಗೆ ನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ರಂಜನ್ ಸೂಚಿಸಿದರು.
ಕಳೆದ 50 ವರ್ಷಗಳ ಹಿಂದೆ ನಿರ್ಮಾಣವಾಗಿದ್ದ ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು, ವಾಸಕ್ಕೆ ಅಯೋಗ್ಯವಾಗಿತ್ತು. ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸೂಕ್ತ ವಸತಿ ನಿಲಯಗಳಿಲ್ಲದೆ ಸಮಸ್ಯೆ ಎದುರಿಸುವಂತಾಗಿತ್ತು. ಇದರಿಂದಾಗಿ ಸೋಮವಾರಪೇಟೆಯ ಆಸ್ಪತ್ರೆಗೆ ವೈದ್ಯರುಗಳು ಬರಲೂ ಸಹ ಹಿಂದೇಟು ಹಾಕುತ್ತಿದ್ದರು. ಈ ಬಗ್ಗೆ ಸಂಘಸಂಸ್ಥೆಗಳು ಹಲವು ಬಾರಿ ಪ್ರತಿಭಟನೆಯನ್ನೂ ನಡೆಸಿದ್ದವು.
ಇದರೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ (ಐಸಿಯು) ಸ್ಥಾಪನೆಗೆ ಯೋಜನೆ ಸಿದ್ದವಾಗಿದ್ದು, ಕಟ್ಟದ ನವೀಕರಣಕ್ಕೆ 7 ಲಕ್ಷ ರೂ. ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಆಸ್ಪತ್ರೆಯ ಆವರಣದಲ್ಲಿ ಸುಸಜ್ಜಿತ ಕ್ಯಾಂಟೀನ್, ನಂದಿನಿ ಹಾಲು ಮಾರಾಟ ಕೇಂದ್ರ, ಹಾಪ್ಕಾಮ್ಸ್, ಕ್ಷೌರಿಕರ ಮಳಿಗೆ ಸೇರಿದಂತೆ ಕೇಂದ್ರ ಸರ್ಕಾರದ ಜನೌಷಧ್ ಯೋಜನೆಯಡಿ ಜನರಿಕ್ ಮೆಡಿಕಲ್ ಸ್ಟೋರ್ ಸ್ಥಾಪನೆಗೆ ಕ್ರಮ ವಹಿಸಲಾಗಿದೆ ಎಂದು ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಪಿ. ರಾಜು ಮಾಹಿತಿ ನೀಡಿದರು.
ಭೂಮಿಪೂಜೆ ಸಂದರ್ಭ ತಾ.ಪಂ. ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ, ಸದಸ್ಯ ಸುರೇಶ್, ವೈದ್ಯಾಧಿಕಾರಿ ಆನಂದ್ಕುಮಾರ್, ಶರತ್ಬಾಬು, ಜಶ್ವಂತ್ಕುಮಾರ್, ಶುಶ್ರೂಷಕಿಯರು, ಸಿಬ್ಬಂದಿ ವರ್ಗ, ಇಲಾಖೆಯ ಅಭಿಯಂತರ ಪುಟ್ಟವೀರಶೆಟ್ಟಿ ಸೇರಿದಂತೆ ಇತರರು ಉಪಸ್ಥಿತರಿದ್ದರು.