ಮಡಿಕೇರಿ, ಜು. 30: ಭಾರತೀಯ ವೈದ್ಯಕೀಯ ಸಂಸ್ಥೆಯ ಕೊಡಗು ಜಿಲ್ಲಾ ಶಾಖೆಯ ವಾರ್ಷಿಕೋತ್ಸವ ಕಾರ್ಯಕ್ರಮ ನಿನ್ನೆ ಸಂಜೆ ಇಲ್ಲಿನ ಹೋಟೆಲ್ ಇಂಟರ್‍ನ್ಯಾಷನಲ್ ಸಭಾಂಗಣದಲ್ಲಿ ಜರುಗಿತು.ಮುಖ್ಯ ಅತಿಥಿಗಳಾಗಿ ಆಗÀಮಿಸಿದ್ದ “ಶಕ್ತಿ” ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅವರು ಮಾತನಾಡಿ “ವೈದ್ಯೋ ನಾರಾಯಣೋ ಹರಿಃ” ಎಂಬಂತೆ ಪ್ರ್ರಾಣ ಸಂಕಷ್ಟದಲ್ಲಿರುವವರ ಪ್ರಾಣ ರಕ್ಷಣೆ, ರೋಗದಿಂದ ಬಳಲುತ್ತಿರುವವರ ರೋಗ ನಿವಾರಣೆಯ ಬೃಹತ್ ಜವಾಬ್ದಾರಿ ವೈದ್ಯರುಗಳದ್ದಾಗಿದೆ. ಆದರೂ, ಕೆಲವೊಮ್ಮೆ ರೋಗದ ತೀವ್ರತೆ, ದುರದೃಷ್ಟದಿಂದಾಗಿ ರೋಗಿ ಮೃತನಾದರೆ ಅವರ ನಿಕಟವರ್ತಿಗಳ ಆಕ್ರೋಶಕ್ಕೂ ಒಳಗಾಗಿ ಒತ್ತಡಕ್ಕೆ ಸಿಲುಕಿ ಕೆಲಸ ಮಾಡುವಂತಹ ಅನಿವಾರ್ಯ ಪರಿಸ್ಥಿತಿ ವೈದ್ಯರುಗಳಿಗೆ ನಿರ್ಮಾಣವಾಗುತ್ತದೆ ಎಂದರು. ಕೊಲಂಬಿಯಾ ಏಷಿಯಾದ ನೆಫ್ರಾಲಜಿ ಕನ್ಸಲ್ಟೆಂಟ್ ಡಾ. ಪಿ.ಎಂ. ಉತ್ತಪ್ಪ ಅವರು ಇತ್ತೀಚೆಗಿನ ಆಧುನೀಕೃತ ಬೆಳವಣಿಗೆಯಲ್ಲಿನ ವೈದ್ಯಕೀಯ ಸಂಶೋಧನೆಗಳ ಕುರಿತಾಗಿ ವಿದ್ಯುನ್ಮಾನ ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು. ಕೆ.ಎಂ.ಸಿ. ಮಾನ್ಯತೆಯ ವಲಯಾಧ್ಯಕ್ಷ ಡಾ. ನಾಗರಾಜ್ ಅವರು ಸಂಸ್ಥೆಯ ಕುರಿತಾಗಿ ಮಾಹಿತಿಯಿತ್ತರು. ಐ.ಎಂ.ಎ. ಕಾರ್ಯದರ್ಶಿ ಡಾ. ಎನ್.ಎಸ್. ನವೀನ್ ಅವರು ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿದ್ಯುನ್ಮಾನ ಪ್ರಾತ್ಯಕ್ಷಿಕೆ ಮೂಲಕ ವಿವರವಿತ್ತರು.ಸಭಾಧ್ಯಕ್ಷತೆ ವಹಿಸಿದ್ದ ಐ.ಎಂ.ಎ.ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಅವರು ಜಿಲ್ಲೆಯ ಹಿರಿಯ ವೈದ್ಯರುಗಳನ್ನು ಸಂಸ್ಥೆ ಸನ್ಮಾನಿಸಿ ಅವರ ಸೇವೆಯನ್ನು ಗುರುತಿಸುತ್ತ ಬಂದಿದ್ದು ಇದೀಗ ವಾರ್ಷಿಕೋತ್ಸವ ಸಂದರ್ಭದಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಹಿರಿಯ ವೈದ್ಯರುಗಳಾದ ಡಾ. ಅಜಿತ್ ಕುಮಾರ್, ಡಾ. ಸೂರ್ಯಕುಮಾರ್, ಡಾ.ಜೋಸೆಫ್ ಪೆರೇರಾ ಡಾ.ಎಸ್.ಎಂ. ಕಾವೇರಪ್ಪ ಹಾಗೂ ಡಾ. ವಿ.ಕೆ.ಚೆಂಗಪ್ಪ ಇವರುಗಳನ್ನು ಸಭೆಯಲ್ಲಿ ಸಂಸ್ಥೆಯ ಪರವಾಗಿ ಸನ್ಮಾನಿಸಲಾಯಿತು. ಡಾ. ಶ್ಯಾಂ ಅಪ್ಪಣ್ಣ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.