ಮಡಿಕೇರಿ, ಜ. 13: ಮುಂದಿನ ಮುಂಗಡ ಪತ್ರದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಗೌರವ ವೇತನವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಉಮಾಶ್ರೀ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ನಗರದಲ್ಲಿ ಸಚಿವರನ್ನು ಭೇಟಿಯಾದ ಸಂಘದ ಪ್ರಮುಖರು ಅಂಗನವಾಡಿ ಕಾರ್ಯಕರ್ತರ ಹಾಗೂ ಸಹಾಯಕಿಯರು ಕಡಿಮೆ ವೇತನದಿಂದ ಸಂಕಷ್ಟದ ಜೀವನ ನಡೆಸುತ್ತಿದ್ದಾರೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿಯಾಗಿ ಗೌರವ ವೇತನ ನೀಡುವ ನಿಯಮ ಜಾರಿಯಲ್ಲಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ವೇತನವನ್ನು ಏರಿಕೆ ಮಾಡದೆ ಇರುವದರಿಂದ ಜೀವನ ಸಾಗಿಸುವದು ಕಷ್ಟಕರವಾಗಿ ಎಂದು ಸಚಿವರ ಗಮನ ಸೆಳೆದ ಸಂಘದ ಪ್ರಮುಖರು ಈ ಬಾರಿಯ ಮುಂಗಡ ಪತ್ರದಲ್ಲಿ ಕಾರ್ಯಕರ್ತರು ಹಾಗೂ ಸಹಾಯಕಿಯರ ವೇತನವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು. ಅಲ್ಲದೆ ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಿಗೂ ಈ ಬಗ್ಗೆ ಮನದಟ್ಟು ಮಾಡಿಕೊಡುವಂತೆ ತಿಳಿಸಿದರು.

ಈ ಸಂದರ್ಭ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರ ಸಂಘದ ರಾಜ್ಯ ಉಪಾಧ್ಯಕ್ಷ ಟಿ.ಪಿ. ರಮೇಶ್, ತಾಲೂಕು ಅಧ್ಯಕ್ಷೆ ವಿ.ಹೆಚ್. ನಾಗರತ್ನ, ಕಾರ್ಯದರ್ಶಿ ಸಿ.ಯು. ಪವಿತ್ರ, ಮಾಜಿ ಅಧ್ಯಕ್ಷೆ ಅಕ್ಕಮ್ಮ, ನಳಿನಿ ಮತ್ತಿತರರು ಹಾಜರಿದ್ದರು.