*ವೀರಾಜಪೇಟೆ, ಡಿ. 20: ತಾ. 18 ರಂದು ಬೆಳಗಿನ ಜಾವ ಹಿಮಾಚಲ ಪ್ರದೇಶದ ಕುಲುಮನಾಲಿ ಇಸ್ಟಿಂಗ್ರಿಯಲ್ಲಿ ದುರ್ಮರಣಕ್ಕೀಡಾದ ವೀರ ಯೋಧ ಕೆ.ಎಸ್. ರಾಜೇಶ್ ಅವರ ಪಾರ್ಥಿವ ಶರೀರ ಬೇತ್ರಿಯ ಕಾವೇರಿ ನದಿಯ ತಪ್ಪಲಲ್ಲಿ ಪಂಚಭೂತಗಳಲ್ಲಿ ಲೀನವಾಯಿತು.ಬೆಳಗ್ಗಿನ ಜಾವ 2.30 ಗಂಟೆಗೆ ಆಗಮಿಸಿದ ಪಾರ್ಥಿವ ಶರೀರವನ್ನು ತಾಲೂಕು ತಹಶೀಲ್ದಾರ್ ಮಹಾದೇವಸ್ವಾಮಿ ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟಿರ ಅನಿಲ್, ಗ್ರಾಮಸ್ಥರಾದ ರಾಬಿನ್ ದೇವಯ್ಯ, ಪವನ್, ಗಣಪತಿ, ವಿವೇಕ್, ಚೇತನ್, ಬಿಪಿನ್ ಇವರುಗಳು ಬರಮಾಡಿಕೊಂಡರು. ಸಾರ್ವಜನಿಕ ದರ್ಶನಕ್ಕಾಗಿ ಕಾಕೋಟುಪರಂಬು ಪ್ರಾಥಮಿಕ ಶಾಲಾ ಮೈದಾನದ ರಂಗ ಮಂಟಪದಲ್ಲಿ ಇಡಲಾಯಿತು. ವೀರ ಯೋಧನಿಗೆ ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ. ಹರೀಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ತಾಲೂಕು ಪಂಚಾಯಿತಿ ಸದಸ್ಯೆ ಸೀತಮ್ಮ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಕಾಂಗ್ರೆಸ್‍ನ ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್,

(ಮೊದಲ ಪುಟದಿಂದ) ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಮಾಜಿ ಸೈನಿಕರ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ನಂಜಪ್ಪ ಸೇರಿದಂತೆ ಹಲವಾರು ಗಣ್ಯರು ಅಂತಿಮ ನಮನ ಸಲ್ಲಿಸಿದರು.

ಬೆಳಿಗ್ಗೆ 10.30 ಗಂಟೆಗೆ ಕಾಕೋಟುಪರಂಬುವಿನಿಂದ ಬೇತ್ರಿಯವರೆಗೆ ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕೊಂಡೊಯ್ಯಲಾಯಿತು. 11.30 ಗಂಟೆಗೆ ಜಿಲ್ಲಾ ಪೊಲೀಸ್ ವತಿಯಿಂದ ಮೂರು ಸುತ್ತು ಕುಶಲ ತೋಪು ಸಿಡಿಸಿ ಸಕಲ ಸರ್ಕಾರಿ ಗೌರವ ಸಲ್ಲಿಸಲಾಯಿತು. ಲಾಸ್ ನಾಯಕ್ ಕೂತಂಡ ಬೋಪಣ್ಣ ಪತ್ನಿ ಶಿಲ್ಪಾ ಅವರಿಗೆ ರಾಷ್ಟ್ರ ಧ್ವಜವನ್ನು ಹಸ್ತಾಂತರಿಸಿ ಸೇನಾ ಗೌರವವನ್ನು ನೀಡಿದರು. ಪತ್ನಿ ಶಿಲ್ಪಾ, ತಾಯಿ ವತ್ಸಲ, ತಂದೆ ಶಶಿ ಕುಟುಂಬಸ್ಥರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು.

ರಾತ್ರಿ ಮಾತನಾಡಿದ್ದರು

ರಾತ್ರಿ ಪತ್ನಿ ಶಿಲ್ಪಾರೊಂದಿಗೆ 18 ನಿಮಿಷ ಮಾತನಾಡಿದ್ದಾರೆ. ಬೆಳಗ್ಗಿನ ಜಾವ 6 ಗಂಟೆಗೆ ನೋಡಿದಾಗ ರಾಜೇಶ್ ಇರಲಿಲ್ಲ. ಎಲ್ಲಾ ಕಡೆಗಳಲ್ಲಿ ಹುಡುಕಾಡಿದೆವು. ಅವರ ಬಳಿ ಇದ್ದ ಕರ್ನಾಟಕ ಸಿಮ್ ಫೋನ್ ಹಾಸಿಗೆಯ ಮೇಲಿತ್ತು. ಹಿಮಾಚಲ ಪ್ರದೇಶದ ಸಿಮ್‍ಗೆ ಫೋನ್ ಮಾಡಿದಾಗ ಡೇರೆಯ ಹೊರಗೆ ಅನತಿ ದೂರದದಲ್ಲಿ ರಿಂಗಾಗುತ್ತಿತ್ತು. ಫೋನ್ ಬಳಿಯಲ್ಲಿ ಒಂದು ಚಪ್ಪಲಿ ಮಾತ್ರ ಇತ್ತು. ಹಿರಿಯ ಅಧಿಕಾರಿಗಳಿಗೆ ಸುದ್ದಿ ಮುಟ್ಟಿಸಿ ಹುಡುಕಾಡಿದಾಗ ಅಂದಾಜು 300 ಅಡಿ ಗುಂಡಿಯಲ್ಲಿ ಮರದ ಬುಡದಲ್ಲಿ ದೇಹ ಸಿಕ್ಕಿಹಾಕಿಕೊಂಡಿತ್ತು. ಆ ಸಂದÀರ್ಭ ಜೀವ ಇರಲಿಲ್ಲ. ನಂತರ ಸ್ಥಳೀಯ ಪೊಲೀಸರಿಗೆ ಸುದ್ದಿಮುಟ್ಟಿಸಿ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಇಲ್ಲಿಗೆ ದೇಹವನ್ನು ತರಲಾಗಿದೆ ಎಂದು ಪಾರ್ಥಿವ ಶರೀರ ತಂದ ಜೊತೆಗಾರ ರಫೀಕ್ ಮಾಹಿತಿ ನೀಡಿದರು.

ಸಹಕರಿಸಿದ ಸ್ಥಳೀಯರು

ಮೃತ ರಾಜೇಶ್ ಸೇನೆಯಲ್ಲಿದ್ದರೂ ಕೂಡ ರಾಜೇಶನ ಪೋಷಕರು ಕೂಲಿ ಕಾರ್ಮಿಕರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಕುಟುಂಬದ ಆಧಾರ ಸ್ಥಂಬವೇ ಕಳಚಿ ಬಿದ್ದ ಕಾರಣ ಏನು ಮಾಡಲಾಗದ ಸ್ಥಿತಿ ಒದಗಿ ಬಂತು. ಆಗ ನೆರವಿಗೆ ಬಂದವರೆ ಊರಿನ ಜನ ಹಾಗೂ ಕಾಕೋಟುಪರಂಬು ಗ್ರಾಮ ಪಂಚಾಯಿತಿ. ತಾ. 18 ರಂದು ಸಾವಿನ ಸುದ್ದಿ ತಿಳಿದ ತಕ್ಷಣ ಆಸ್ತಿ ಅಂತಸ್ತು, ಧರ್ಮ, ಜಾತಿ ಲೆಕ್ಕಾಚಾರವನ್ನು ಬದಿಗೊತ್ತಿ ದೇಶಕ್ಕಾಗಿ ಮಡಿದ ವೀರ ಯೋಧನ ಕುಟುಂಬಕ್ಕೆ ನೆರವಾದರು. ಇರಲು ಸೂರಿಲ್ಲದೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಮನೆಯಲ್ಲಿ ಪಾರ್ಥಿವ ಶರೀರ ಇಡಲು ಸ್ಥಳಾವಕಾಶದ ಕೊರತೆ ಇದ್ದ ಕಾರಣ ಕಾಕೋಟುಪರಂಬು ಗ್ರಾಮ ಪಂಚಾಯಿತಿಯಲ್ಲಿ ಗ್ರಾಮಸ್ಥರು ಸಭೆ ನಡೆಸಿ ಶಾಲಾ ಮೈದಾನದಲ್ಲಿ ಇರಿಸಿ ಅಂತಿಮ ನಮನವನ್ನು ಸಲ್ಲಿಸುವಂತೆ ತೀರ್ಮಾನ ತೆಗೆದುಕೊಂಡು ಅಂತ್ಯ ಸಂಸ್ಕಾರದ ಸಂಪೂರ್ಣ ಜವಬ್ದಾರಿಯನ್ನು ಹೊತ್ತುಕೊಂಡು ಕಡೆಯ ಘಳಿಗೆಯವರೆಗೆ ಜವಾಬ್ದಾರಿಯನ್ನು ನಿಭಾಯಿಸಿ ಜನಪ್ರತಿನಿಧಿಗಳು ಸೇರಿದಂತೆ ಎಲ್ಲರ ಪ್ರಶಂಸೆಗೆ ಪಾತ್ರರಾದರು.

ಶಾಲೆಗಳಿಗೆ ರಜೆ: ಮೃತ ಯೋಧ ಕಾಕೋಟುಪರಂಬು ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡಿದ ಹಿನ್ನೆಲೆಯಲ್ಲಿ ಶಾಲೆಯ ಎದುರು ಇರುವ ಮೈದಾನದಲ್ಲಿ ಅಂತಿಮ ನಮನಕ್ಕೆ ಅವಕಾಶ ಮಾಡಲಾಯಿತು. ಮೃತರ ಗೌರವಾರ್ಥ ಶಾಲೆಗೆ ರಜೆ ನೀಡಲಾಯಿತು. ಸುತ್ತಮತ್ತಲ ಶಾಲೆಗಳಾದ ಕಾಕೋಟುಪರಂಬು ಪ್ರೌಢಶಾಲೆ, ಅರಮೇರಿ ಎಸ್.ಎಂ.ಎಸ್ ವಿದ್ಯಾಸಂಸ್ಥೆ, ಮೂರ್ನಾಡು ವಿದ್ಯಾಸಂಸ್ಥೆಯ ಎನ್‍ಸಿ.ಸಿ. ಘಟಕ ಗೌರವ ಸೂಚಿಸಲಾಯಿತು. ಗ್ರಾಮ ಪಂಚಾಯಿತಿ, ಕೆನರಾ ಬ್ಯಾಂಕ್, ವಿ.ಎಸ್.ಎಸ್,ಎನ್. ಬ್ಯಾಂಕ್‍ಗಳು ಪಾರ್ಥಿವ ಶರೀರವನ್ನು ತೆಗೆಯುವವರೆಗೆ ಬಂದ್ ಮಾಡಿ ಗೌರವ ಸೂಚಿಸಿದವು.

ತಾಯಿ-ಪತ್ನಿ ರೋಧನ: ರಾಜ ನೀ ನನ್ನ ಬುಟ್ಟ್‍ಟ್ ಪೋಯಿಟಿಯಾ, ಎಣಿಕಪ್ಪಾ. ನಾ ಎಪ್ಪುಡಿ ಇರ್‍ಕನದ್, ಎಣಿಕಪ್ಪಾ. ತಿಂಗಳ ಸಂಬಳದಲ್ಲಿ ನಿಮ್ಮ ಕಷ್ಟಗಳನ್ನು ತೀರಿಸುತ್ತೇನೆ ಅಂತ ಹೇಳಿ ಮೂರು ತಿಂಗಳ ಹಿಂದೆ ಬಂದು ಹೋಗಿದ್ದ. ಎದ್ದೇಳು ಮಗನೇ ಒಂದು ಬಾರಿ ಏದ್ದೇಳು. ಅಂತ ತಾಯಿ ವತ್ಸಲಾ ತನ್ನ ದುಃಖವನ್ನು ಮಲೆಯಾಳ, ಕನ್ನಡ, ತಮಿಳ್ ಮಿಶ್ರಿತ ಭಾಷೆಯಲ್ಲಿ ಹೊರ ಹಾಕಿ ರೋದಿಸುತ್ತಿದ್ದ ದೃಶ್ಯ ಮನಕಲಕುತ್ತಿತ್ತು.

ಮೃತ ರಾಜೇಶ್ ಅಂತ್ಯ ಸಂಸ್ಕಾರಕ್ಕಾಗಿ ತಾಲೂಕು ಆಡಳಿತದಿಂದ ಐದು ಸಾವಿರ ಮತ್ತು ಸೇನೆಯಿಂದ ಐದು ಸಾವಿರ ನಗದನ್ನು ಸ್ವೀಕರಿಸುವಾಗ ಇದೆಂತಾ ಅನ್ಯಾಯ, ದಿನಕ್ಕೆ ಮೂರು ಬಾರಿ ಫೋನ್ ಮಾಡುತ್ತಿದ್ದರು. ಮುಂದಿನ ತಿಂಗಳು 2ಕ್ಕೆ ಊರಿಗೆ ಬರುತ್ತೇನೆ ಚೆನೈಗೆ ಹೋಗಿ ಬರಲು ಟ್ರೈನ್ ಟಿಕೇಟ್ ಬುಕ್ ಮಾಡಿಸಿದ್ದರು ಸಾರ್, ದೇವರು ಎಂತಹ ಅನ್ಯಾಯ ಮಾಡಿದ್ದಾರೆ. ನೀವು ಎಷ್ಟೆ ಹಣ ಕೊಟ್ಟರು ನನ್ನ ಗಂಡ ಬರುತ್ತಾನೆಯೆ ಎಂದು ಪತ್ನಿ ಶಿಲ್ಪಾ ದುಃಖ ಸಹಿಸಲಾಗದೆ ಚೀರಾಡುತ್ತಿದ್ದರು.

ಕೆಜಿಬಿ ಖಂಡನೆ

ಮನೆಯ ಆಧಾರ ಸ್ಥಂಬವನ್ನೆ ಕಳೆದುಕೊಂಡ ಕುಟುಂಬವನ್ನು ಸಂತೈಸುವದು ಜಿಲ್ಲಾಡಳಿತದ ಕೆಲಸವಾಗಿದೆ. ಅದರಲ್ಲೂ ಸೇನೆಯಲ್ಲಿ ಮೃತಪಟ್ಟ ಯೋಧನ ಪಾರ್ಥೀವ ಶರೀರವನ್ನು ನಿರ್ಲಕ್ಷಿಸಿದ ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಯ ಕಾರ್ಯ ವೈಖರಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿಗಳಿಗೂ ದೂರು ನೀಡುತ್ತೇನೆ ಎಂದು ವೀರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದರು.

ಪತ್ರಿಕೆಯೊಂದಿಗೆ ಮಾತನಾಡಿ ಹಿಂದಿನ ವಾಜಪೇಯಿ ಸರ್ಕಾರ ಇದ್ದಾಗ ಸೇನೆಯ ಕರ್ತವ್ಯದಲ್ಲಿ ಯೋಧ ಮೃತ ಪಟ್ಟರೆ ಅವರ ಪಾರ್ಥಿವ ಶರೀರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಬರಮಾಡಿಕೊಂಡು ಅಂತ್ಯ ಸಂಸ್ಕಾರ ನಡೆಸುವವರೆಗೆ ಜಿಲ್ಲಾಡಳಿತ ಮುತುವರ್ಜಿ ವಹಿಸಬೇಕು ಎಂದು ಆದೇಶ ಹೊರಡಿಸಿದೆ. ಕಳೆದ ಮೂರು ದಿನಗಳ ಹಿಂದೆಯೇ ಜಿಲ್ಲೆಯ ಯೋಧ ಸೇನೆಯಲ್ಲಿ ಮೃತ ಪಟ್ಟಿರುವ ವಿಚಾರ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಗೊತ್ತಿದೆ. ಸೌಜನ್ಯಕ್ಕಾದರೂ ಮೃತ ಕುಟುಂಬವನ್ನು ಸಂತೈಸಲಿಲ್ಲ. ಇಂತಹ ಅಧಿಕಾರಿಗಳ ವರ್ತನೆಯನ್ನು ಖಂಡಿಸುತ್ತೇನೆ.

ಮೃತ ಕುಟುಂಬದವರು ಕಡು ಬಡವರಾಗಿರುವದರಿಂದ ಮತ್ತು ಸೂರಿಲ್ಲದ ಕಾರಣ ನಿವೇಶನ ಹಾಗೂ ಮೃತರ ಪತ್ನಿ ಎಂ.ಎ. ಬಿ.ಎಡ್. ವ್ಯಾಸಂಗ ಮಾಡಿರುವದರಿಂದ ಸರ್ಕಾರಿ ಕೆಲಸ ಕೊಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.