*ಗೋಣಿಕೊಪ್ಪಲು, ಆ. 23: ವೀರಾಜಪೇಟೆ ತಾಲೂಕನ್ನು ಬರ ಪೀಡಿತ ಪ್ರದೇಶ ಎಂದು ಘೋಷಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸುವದಾಗಿ ಜಿಲ್ಲಾ ಮಖ್ಯ ಕಾರ್ಯನಿರ್ವಹಣಾಧಿ ಕಾರಿ ಚಾರುಲತಾ ಸೋಮಲ್ ಹೇಳಿದರು.ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಬಾಳೆಲೆ, ನಿಟ್ಟೂರು, ಪೊನ್ನಪ್ಪಸಂತೆ ಗ್ರಾ.ಪಂ. ವ್ಯಾಪ್ತಿಯ ಜನಪ್ರತಿನಿಧಿಗಳ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಂಪರ್ಕ ಸಭೆಯಲ್ಲಿ ತಿಳಿಸಿದರು.ತಾಲೂಕಿನಲ್ಲಿ ಈ ಬಾರಿ ಅತೀ ಕಡಿಮೆ ಮಳೆಯಾಗಿದೆ. ಕೃಷಿ ಚಟುವಟಿಕೆಗಳು ಹಿನ್ನಡೆ ಸಾಧಿಸಿದೆ. ಇದನ್ನು ಮನಗಂಡು ತಾಲೂಕನ್ನು ಬರ ಪ್ರದೇಶವಾಗಿ ಘೋಷಿಸಬೇಕು ಎಂದು ಸಭೆಯಲ್ಲಿ ಆದೇಂಗಡ ವಿನು ಉತ್ತಪ್ಪ ಸಭೆಯ ಗಮನಕ್ಕೆ ತಂದರು.
ಬಾಳೆಲೆ ಸೇರಿದಂತೆ ತಾಲೂಕಿನಾದ್ಯಂತ ಅಸ್ಸಾಂ ಕಾರ್ಮಿಕರೇ ಹೆಚ್ಚಾಗಿ ಕಾಣಿಸುತ್ತಿದ್ದಾರೆ. ಇಲ್ಲಿನ ಮೂಲ ನಿವಾಸಿಗಳಿಗ್ಗಿಂತ ಅಸ್ಸಾಂ ನಿವಾಸಿಗಳ ಸಂಖ್ಯೆ ಹೆಚ್ಚಾಗಿದೆ. ಇವರ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೇಕು. ಗುರುತಿನ ಚೀಟಿ, ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು
ಪಡೆದುಕೊಳ್ಳಬೇಕು ಎಂದು ಪೊಲೀಸ್ ಇಲಾಖೆಗೆ ಬಾಳೆಲೆ ಗ್ರಾ.ಪಂ. ಸದಸ್ಯ ಸುಖೇಶ್ ತಿಳಿಸಿದರು. ಇದಕ್ಕೆ ಉತ್ತರಿಸಿದ ಪೊನ್ನಂಪೇಟೆ ಠಾಣಾಧಿಕಾರಿ ಜಯರಾಮ್ ಈಗಾಗಲೇ ಈ ಬಗ್ಗೆ ತನಿಖೆ ಕೈಗೊಂಡಿದ್ದೇವೆ. ತಾಲೂಕು ಮಟ್ಟದಲ್ಲಿ ವಿಶೇಷ ತನಿಖಾ ತಂಡವನ್ನು ನೇಮಿಸಿದ್ದೇವೆ. ಪ್ರತಿ ತೋಟದ ಮಾಲೀಕರಲ್ಲಿಗೆ ತೆರಳಿ ಇವರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಇವರು ಬಾಂಗ್ಲಾ ದೇಶದವರು ಎಂದು ಹೇಳಲು ಯಾವದೇ ಆಧಾರಗಳಿಲ್ಲ. ಪ್ರತಿಯೊಬ್ಬರು ಅಸ್ಸಾಂ ರಾಜ್ಯದ ಗುರುತಿನ ಚೀಟಿ ಹೊಂದಿದ್ದಾರೆ ಎಂದು ಹೇಳಿದರು.
ಗಿರಿಜನ ಸಂಚಾರಿ ಆರೋಗ್ಯ ಘಟಕ ತಾಲೂಕಿನಲ್ಲಿ ನಿಷ್ಕ್ರೀಯ ಗೊಂಡಿದೆ. ಡಾ. ರವೀಂದ್ರ ಕರ್ತವ್ಯ ನಿರ್ವಹಿಸುತ್ತಿಲ್ಲ. ಸರಕಾರದ ಸಂಬಳ ಪಡೆದು ಕೆಲಸ ನಿರ್ವಹಿಸುತ್ತಿಲ್ಲ. ಡಾ. ರವೀಂದ್ರ ಜಿಲ್ಲಾ ವೈದ್ಯಾಧಿಕಾರಿಗಳ ಆಪ್ತನಾದು ದರಿಂದ ಇವರ ಮೇಲೆ ಕ್ರಮ ಕೈಗೊಳ್ಳುತ್ತಿಲ್ಲ. ಇವರ ಸೇವೆಯ ಬಗ್ಗೆ ಸಭೆಯ ಗಮನಕ್ಕೆ ತರಬೇಕು. ವೈದÀ್ಯ ರವೀಂದ್ರ ಅವರನ್ನು ಸಭೆಗೆ ಕರೆಸುವಂತೆ ಬಾಳೆಲೆ ಪಂಚಾಯಿತಿ ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್ ಒತ್ತಾಯಿಸಿದರು.
ಆರೋಗ್ಯ ಇಲಾಖೆಯಲ್ಲಿ ವೈದ್ಯರು ಹಾಗೂ ದಾದಿಯರ ಕೊರತೆ ಇದೆ. ಆ್ಯಂಬುಲೆನ್ಸ್ ಸೇವೆಯು ಸಮರ್ಪಕವಾಗಿ ನಡೆಯುತ್ತಿಲ್ಲ. ಡಿ.ಹೆಚ್.ಓ. ಗ್ರಾಮೀಣ ಭಾಗದ ಬಗ್ಗೆ ಗಮನ ಹರಿಸುತ್ತಿಲ್ಲ. ಯಾವದೇ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುತ್ತಿಲ್ಲ. ಸರಕಾರದ ಸಂಬಳದಿಂದ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ನೇಮಕವಾಗಿಲ್ಲ. ಆವರಣದ ಸುತ್ತ ಕಾಡು ಬೆಳೆದು ನಿಂತಿದೆ. ಸೆಪ್ಟೆಂಬರ್ 5ರ ಒಳಗೆ ವೈದ್ಯರನ್ನು ನೇಮಕಗೊಳಿ ಸದಿದ್ದರೆ ಆರೋಗ್ಯ ಕೇಂದ್ರಕ್ಕೆ ಬೀಗ ಜಡಿದು ಪ್ರತಿಭಟಿಸುವದಾಗಿ ಎಚ್ಚರಿಸಿದರು. ಇದಕ್ಕೆ ಉತ್ತರಿಸಿದ ತಾಲೂಕು ವೈದ್ಯಾಧಿಕಾರಿ ಯತಿರಾಜ್, ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಮುಂದಿನ ದಿನಗಳಲ್ಲಿ ಸಮಸ್ಯೆ ಬಗೆ ಹರಿಸುವದಾಗಿ ಭರವಸೆ ನೀಡಿದರು. ಡಾ. ರವೀಂದ್ರ ಅವರು ವ್ಯಾಪ್ತಿ ಪ್ರದೇಶದ ಹೊರಗಿದ್ದು, ಸಭೆಗೆ ಬರುವಂತೆ ಹೇಳಲು ಸಾಧ್ಯವಾಗುತ್ತಿಲ್ಲ. ಸಂಚಾರಿ ಘಟಕದ ಸೇವಾ ವರದಿಯನ್ನು ಜಿಲ್ಲಾ ಆರೋಗ್ಯ ಅಧಿಕಾರಿಗೆ ನೀಡುತ್ತಿರುವದಾಗಿ ತಿಳಿಸಿದರು.
ಬಾಳೆಲೆ ಹೋಬಳಿಗೆ ಸೆಸ್ಕ್ ಉಪಕೇಂದ್ರ ನಿರ್ಮಿಸಲು ಆದೇಶ ಬಂದಿದೆ. ಪಂಚಾಯಿತಿ ಸ್ಥಳ ಗುರುತಿಸಿದರೆ ಆ ಸ್ಥಳದಲ್ಲಿ ಉಪಕೇಂದ್ರ ತೆರೆಯಲು ಸಾಧ್ಯವಾಗುತ್ತದೆ ಎಂದು ಸೆÉಸ್ಕ್‍ನ ತಾಲೂಕು ಸಹಾಯಕ ಇಂಜಿನಿಯರ್ ಅಂಕಯ್ಯ ತಿಳಿಸಿದರು. ನಿಟ್ಟೂರು ಗ್ರಾಮದಲ್ಲಿ ಹುಲಿ ಧಾಳಿಯಿಂದ ಮೃತಪಟ್ಟ ಜಾನುವಾರು ಗಳ ಮಾಲೀಕರಿಗೆ ಪರಿಹಾರ ಧನ ಅರಣ್ಯ ಇಲಾಖೆ ನೀಡಿಲ್ಲ ಎಂದು ಸಭೆಯಲ್ಲಿ ಜನಪ್ರತಿನಿಧಿಗಳು ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರು. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳೇ ಸಭೆಯಲ್ಲಿ ಹಾಜರಿರಲಿಲ್ಲ. ಇದಕ್ಕೆ ಸಭೆ ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಯ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತೀವ್ರ ಚರ್ಚೆಗೆ ಒಳಗಾದ ಅಬಕಾರಿ ಇಲಾಖೆಯ ಅಧಿಕಾರಿಗಳು ಸಭೆ ಮುಗಿದ ನಂತರ ಬಂದು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡಿ ಹಿಂದುರಿಗಿದರು. ನ್ಯಾಯ ಬೆಲೆ ಅಂಗಡಿಗಳಲ್ಲಿ ಕಳಪೆ ಮತ್ತು ಹುಳು ಹಿಡಿದ ಅಕ್ಕಿ ಮತ್ತು ಗೋದಿಗಳನ್ನು ವಿತರಿಸುತ್ತಿದ್ದಾರೆ. ಈ ಬಗ್ಗೆ ಆಹಾರ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಜನಪ್ರತಿನಿಧಿಗಳು ಒತ್ತಾಯಿಸಿದರು.
ಸಭೆಯಲ್ಲಿ ಗಮನಕ್ಕೆ ಬಂದ ಎಲ್ಲಾ ವಿಚಾರಗಳನ್ನು ಸರಕಾರಕ್ಕೆ ವರದಿ ಒಪ್ಪಿಸುವದಾಗಿ ಮತ್ತು ತಮ್ಮ ವ್ಯಾಪ್ತಿಗೆ ಒಳಪಡುವ ಸಮಸ್ಯೆಗಳನ್ನು ಬಗೆಹರಿಸು ವದಾಗಿ ಸಿ.ಇ.ಓ. ಚಾರುಲತಾ ಸೋಮಲ್ ಭರವಸೆ ನೀಡಿದರು. ಬಾಳೆಲೆ ಕ್ಷೇತ್ರ ಜಿ.ಪಂ. ಸದಸ್ಯ ಬಾನಂಡ ಪೃಥ್ವಿ ಪ್ರಾಸ್ತವಿಕ ಮಾತನಾಡಿದರು. ತಾ.ಪಂ. ಸದಸ್ಯ ಪಲ್ವಿನ್ ಪೂಣಚ್ಚ, ಬಾಳೆಲೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ಬಾಳೆಲೆ ಗ್ರಾ.ಪಂ. ಅಧ್ಯಕ್ಷೆ ಕಾಂಡೇರ ಕುಸುಮ, ನಿಟ್ಟೂರು ಗ್ರಾ.ಪಂ. ಅಧ್ಯಕ್ಷೆ ಕಾಡ್ಯಮಾಡ ಅನಿತಾ, ಕೆ.ಬಾಡಗ ಗ್ರಾ.ಪಂ. ಅಧ್ಯೆಕ್ಷೆ ಉಷಾ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.