ವೀರಾಜಪೇಟೆ, ಡಿ. 8: ವೀರಾಜಪೇಟೆ ಪಟ್ಟಣದಲ್ಲಿ ಪ್ರತಿ ವ್ಯಕ್ತಿಗೆ ತಲಾ 135 ಲೀಟರ್ನಷ್ಟು ನೀರನ್ನು ಬಳಸುವ ಸಲುವಾಗಿ ಕುಡಿಯುವ ನೀರಿಗೆ ಆದ್ಯತೆ ಕೊಟ್ಟು ರೂ. ಎರಡು ಕೋಟಿಯಲ್ಲಿ ಸರ್ಕಾರದ ಆದೇಶದಂತೆ ಶೇಕಡ 85ರಂತೆ ರೂ. 1 ಕೋಟಿ 70 ಲಕ್ಷವನ್ನು ಕಾಮಗಾರಿಗೆ ವೆಚ್ಚ ಮಾಡಲು ಸಭೆಯಲ್ಲಿದ್ದ ಸರ್ವ ಸದಸ್ಯರು ಅಂಗೀಕಾರ ನೀಡಿದರು.ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕುಡಿಯುವ ನೀರು ಸೌಲಭ್ಯ ಒದಗಿಸುವ ಕುರಿತು ವಿಸ್ತøತವಾಗಿ ವಿಚಾರ ವಿನಿಮಯ ಮಾಡಿ ಮುಖ್ಯ ಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿಯ ಮೂರನೇ ಹಂತದ ನಗರೋತ್ಥಾನ (ಮುನಿಸಿ ಪಾಲಿಟಿ) -3 ಯೋಜನೆಯಲ್ಲಿ ಪಟ್ಟಣ ಪಂಚಾಯಿತಿಗೆ ರೂ. ಎರಡು ಕೋಟಿ ಅನುದಾನದಲ್ಲಿ ಹೆಚ್ಚಿನ ಮೊತ್ತವನ್ನು ಕುಡಿಯುವ ನೀರಿಗೆ ವೆಚ್ಚ ಮಾಡಲು ಸಭೆ ನಿರ್ಧರಿಸಿತು.
(ಮೊದಲ ಪುಟದಿಂದ) ಅನುದಾನದ ಎರಡು ಕೋಟಿಯಲ್ಲಿ ರೂ. 70 ಲಕ್ಷವನ್ನು 5 ತೆರೆದ ಬಾವಿ ಸೇರಿದಂತೆ ಇತರ ನೀರಿನ ಸೌಲಭ್ಯಕ್ಕೆ ಬಳಸುವದು. ಪಟ್ಟಣಕ್ಕೆ ನೀರಿನ ಅಭಾವದ ಸಮಸ್ಯೆ ಎದುರಾಗದಂತೆ ಮುಂಜಾಗರುಕವಾಗಿ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿತು.
ಸಭೆಯಲ್ಲಿ ಹಾಜರಿದ್ದ ಮಡಿಕೇರಿಯ ನೀರು ಸರಬರಾಜು ಹಾಗೂ ಒಳ ಚರಂಡಿ ಮಂಡಳಿಯ ಸಹಾಯಕ ಕಾರ್ಯ ಪಾಲಕ ಪ್ರಸನ್ನ ಕುಮಾರ್ ಮಾತನಾಡಿ, ಈ ಹಿಂದೆ ಪ್ರತಿಯೊಬ್ಬರಿಗೆ ತಲಾ 70 ಲೀಟರ್ನಷ್ಟು ನೀರನ್ನು ನಿಗದಿಪಡಿಸಲಾಗಿದ್ದನ್ನು ಈಗ ಸರ್ಕಾರ sಸಮೀಕ್ಷೆಯ ಪ್ರಕಾರ 135 ಲೀಟರ್ ನೀರು ಸರಬರಾಜು ಮಾಡಲು ತೀರ್ಮಾನಿಸಿದೆ. ಈ ಪ್ರಕಾರ ನೀರು ಸರಬರಾಜು, ನೀರಿನ ಶೇಖರಣೆಯನ್ನು ಅಭಿವೃದ್ಧಿ ಪಡಿಸಬೇಕು. ಶುದ್ದ ಕುಡಿಯುವ ನೀರಿನ ಘಟಕ ಪ್ರಾರಂಭಿಸಲು ಇಲಾಖೆಯಿಂದಲೇ ಸಹಾಯ ಧನ ನೀಡಲಾಗುವದು. ನೀರು ಸರಬರಾಜಿಗೆ ಸಂಬಂಧಿಸಿದಂತೆ ಮಂಡಳಿಯಿಂದ ಎಲ್ಲ್ಲಾ ಸಹಕಾರ ನೀಡಲಾಗುವದು ಎಂದರು.
ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ, ಸಮುಚ್ಚಯ ಪೊಲೀಸ್ ಠಾಣೆಗಳ ಹಿಂಬದಿಯ ಮೈದಾನದಲ್ಲಿ ನೀರು ಹರಿಯಲು ಚರಂಡಿ ಇರುವದಿಲ್ಲ. ಇಲ್ಲಿ ಹೊಸ ಚರಂಡಿ ನಿರ್ಮಾಣ, ಪೌರ ಕಾರ್ಮಿಕರ ವಸತಿ ಗೃಹಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು ಸುಣ್ಣದ ಬೀದಿ ಹಾಗೂ ಮೀನುಪೇಟೆಯಲ್ಲಿ ಎರಡು ಓವರ್ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಲು ಸಭೆಗೆ ಸೂಚಿಸಿದಾಗ ಸಭೆ ಸಮ್ಮತಿ ನೀಡಿತು.
ಸಚಿನ್ ಕುಟ್ಟಯ್ಯ ಮಾತನಾಡಿ, ಕುಡಿಯುವ ನೀರಿನ ಯೋಜನೆಯ ವೆಚ್ಚದ ನಂತರ ಉಳಿದ ಹಣದಲ್ಲಿ ಪಟ್ಟಣ ಪಂಚಾಯಿತಿಯ ಹದಿನಾರು ವಾರ್ಡ್ಗಳಲ್ಲಿ ಸಮಾನವಾಗಿ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವದು. ರೂ. ಹತ್ತು ಲಕ್ಷ ವೆಚ್ಚದಲ್ಲಿ ಸಾರ್ವಜನಿಕ ಆಸ್ಪತ್ರೆಗೆ ಹೋಗುವ ಕೋರ್ಟ್ ಬಳಿಯ ರಸ್ತೆಯನ್ನು ಅಭಿವೃದ್ಧಿಪಡಿಸಲು ಸಭೆ ತೀರ್ಮಾನಿಸಿತು.
ಅಭಿಯಂತರ ಎನ್.ಪಿ. ಹೇಮ್ಕುಮಾರ್ ಮಾತನಾಡಿ, ಸರಕಾರದಿಂದ ಬಂದಿರುವ ಅನುದಾನದಲ್ಲಿ ನೀರಿಗೆ ಆದ್ಯತೆ ಕೊಟ್ಟು ಈ ಪೈಕಿ ಶೇಕಡ 24.10ನ್ನು ಅನುಸೂಚಿತ ಜಾತಿ ಪಂಗಡಗಳ ಅಭಿವೃದ್ಧಿ ಕಾಮಗಾರಿಗಳಿಗೆ ಬಳಸಲಾಗುವದು ಎಂದು ಸಭೆಗೆ ತಿಳಿಸಿದರು.
ಕುಡಿಯುವ ನೀರಿನ ಸರಬರಾಜಿಗೆ ವಿಶೇಷ ಗಮನ ಹರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ದಿನ ನಿತ್ಯ ಕಸ ಸಂಗ್ರಹದ ಶುಲ್ಕ ಪರಿಷ್ಕರಣೆಗೂ ಸಭೆ ಸಮ್ಮತಿಸಿತು. ಚರ್ಚೆಯಲ್ಲಿ ಎಸ್.ಎಚ್. ಮೈನುದ್ದೀನ್, ಕೆ.ಎಚ್.ವಿಶ್ವನಾಥ್, ಟಿ.ಜೆ.ಶಂಕರ್ ಶೆಟ್ಟಿ, ರಂಜಿ ಪೂಣಚ್ಚ. ರಾಜೇಶ್, ಇ.ಸಿ.ಜೀವನ್ ಮತ್ತಿತರರು ಭಾಗವಹಿಸಿದ್ದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ.ಸುನೀತ, ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್, ಸಿಬ್ಬಂದಿಗಳು ಹಾಜರಿದ್ದರು.
ಪೂರ್ವಭಾವಿ ಸಭೆ
ಪಟ್ಟಣ ಪಂಚಾಯಿತಿಯ ಎರಡು ಕೋಟಿ ಕ್ರಿಯಾಯೋಜನೆಯ ನಂತರ 2017-18ನೇ ಸಾಲಿಗೆ ಆಯವ್ಯಯ ತಯಾರಿಸುವ ಕುರಿತು ಪೂರ್ವಭಾವಿ ಸಭೆ ನಡೆಯಿತು. ಮುಂದಿನ ಸಾಲಿಗೆ ಆಯವ್ಯಯ ಬಜೆಟ್ ತಯಾರಿಸುವ ಸಂಬಂಧದಲ್ಲಿ ಚರ್ಚೆ ನಡೆಸಿದರು. ಪಟ್ಟಣ ಪಂಚಾಯಿತಿಗೆ ಎಲ್ಲಾ ಮೂಲಗಳಿಂದ ಆದಾಯವನ್ನು ಕ್ರೋಢೀಕರಿಸಿ ನಿರಂತರ ಅಭಿವೃದ್ಧಿ ಜನಪರ ಕಾಮಗಾರಿಗಳನ್ನು ಕೈಗೊಳ್ಳುವದು. ನೀರು ರಸ್ತೆ ಚರಂಡಿ ದುರಸ್ತಿ ನಿರ್ಮಾಣಕ್ಕೆ ಆದ್ಯತೆ ನೀಡಿ ಉಳಿತಾಯ ಬಜೆಟ್ ಅಂಗೀಕರಿಸುವ ಬಜೆಟ್ನ್ನು ಕ್ರಮಬದ್ಧವಾಗಿ ತಯಾರಿಸಲು ಸಭೆ ತೀರ್ಮಾನಿಸಿತು. ಈ ಆಯವ್ಯಯ ಬಜೆಟ್ನ ಪೂರ್ವಭಾವಿ ಸಭೆಯು ಅಧ್ಯಕ್ಷ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ಜರುಗಿತು.