ವೀರಾಜಪೇಟೆ, ಜ. 24: ರಾಜ್ಯದ ಎಲ್ಲ ಧಾರ್ಮಿಕ ಕೇಂದ್ರಗಳಲ್ಲಿ ಶ್ರಮದಾನದ ಮೂಲಕ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದೆ ಎಂದು ಯೋಜನೆಯ ಅಧಿಕಾರಿ ಸದಾಶಿವ ಗೌಡ ಹೇಳಿದರು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ ವಲಯದ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ಗಾಂಧಿನಗರ, ಶ್ರೀ ಮಲೆ ಮಹಾದೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಸಂಯುಕ್ತ ಆಶ್ರಯದಲ್ಲಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಧಾರ್ಮಿಕ ಕೇಂದ್ರಗಳು ಸ್ವಚ್ಛತೆಯಿಂದ ಇದ್ದಲ್ಲಿ ಭಯ-ಭಕ್ತಿ ಮೂಡಲು ಸಾಧ್ಯ. ಯೋಜನೆ ವತಿಯಿಂದ ಈ ವರ್ಷ ರಾಜ್ಯವ್ಯಾಪ್ತಿಯ ದೇವಾಲಯ, ಮಸೀದಿ ಹಾಗೂ ಚರ್ಚಗಳ ಆವರಣಗಳನ್ನು ಸ್ವಚ್ಛತೆ ಮಾಡುವ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆ ಅವರ ಆದೇಶದಂತೆ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಮಲೆ ಮಹಾದೇಶ್ವರ ದೇವಾಲಯದ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ಮಾತನಾಡಿ, ಸ್ವಚ್ಛತೆ ಪ್ರತಿಯೊಬ್ಬರ ಮನೆಯಿಂದ ಪ್ರಾರಂಭವಾಗಬೇಕು. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡಿರುವ ಸ್ವಚ್ಛತಾ ಕಾರ್ಯ ನಿರಂತರವಾಗಿ ನಡೆಯಲಿ ಎಂದು ಶ್ಲಾಘಿಸಿದರು.

ಈ ಸಂದರ್ಭ ದೇವಾಲಯದ ತಕ್ಕ ಮುಖ್ಯಸ್ಥ ಕೊಳುವಂಡ ಸುಮಂತ್ ಪೊನ್ನಣ್ಣ, ಕಾರ್ಯದರ್ಶಿ ಬೊಳ್ಳಚಂಡ ಪ್ರಕಾಶ್, ಸದಸ್ಯರು-ಅರ್ಚಕರು, ಸ್ವ-ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಮಾಧವಾ, ಶೋಭಾ, ಸೇವಾ ಪ್ರತಿನಿಧಿಗಳಾದ ಮೀನಾಕ್ಷಿ, ನೇತ್ರಾವತಿ, ಯೋಜನೆಯ ಮೇಲ್ವಿಚಾರಕ ಎಸ್. ರವೀಂದ್ರ ಹಾಗೂ ಒಕ್ಕೂಟದ ಸದಸ್ಯರುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಶ್ರದ್ಧಾ ಕೇಂದ್ರಗಳ ಸ್ವಚ್ಛತೆ ಬಗ್ಗೆ ಧರ್ಮಸ್ಥಳದಿಂದ ಹೊರಡಿಸಲಾದ ಕರಪತ್ರವನ್ನು ಬಿಡುಗಡೆ ಮಾಡಲಾಯಿತು.