ವೀರಾಜಪೇಟೆ, ಜ. 17: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಅಯ್ಯಪ್ಪ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಶನಿವಾರ ಮಕರಜ್ಯೋತಿ ಮಹಾ ಪೂಜಾ ಸೇವೆಯನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಮಕರ ಸಂಕ್ರಾಂತಿಯ ಪ್ರಯುಕ್ತ ದೇವಾಲಯದಲ್ಲಿ ಬೆಳಗ್ಗಿನಿಂದಲೇ ಸಾಂಪ್ರದಾಯಿಕ ಪೂಜಾ ವಿಧಿ ವಿಧಾನಗಳು ಜರುಗಿದವು. ಸಂಜೆ 6.45ಕ್ಕೆ ಕೇರಳದ ಶಭರಿಮಲೈನಲ್ಲಿ ಅಯ್ಯಪ್ಪ ವೃತಧಾರಿ ಭಕ್ತಾದಿಗಳಿಗೆ ಜ್ಯೋತಿದರ್ಶನವಾದ ತಕ್ಷಣ ದೇವಾಲಯದಲ್ಲಿ ಮಹಾ ಪೂಜಾ ಸೇವೆ ನಡೆಯಿತು.
ಪ್ರತಿ ವರ್ಷದಂತೆ ಈ ಬಾರಿಯು ರಾತ್ರಿ 7 ಗಂಟೆಗೆ ಚಂಡೆ ಮದ್ದಳೆಯೊಂದಿಗೆ ಉತ್ಸವ ಮೂರ್ತಿಯ ದೇವಾಲಯದ ಸುತ್ತ ನೃತ್ಯ ಪ್ರದಕ್ಷಿಣೆ (ತಡಂಬು) ಕಾರ್ಯಕ್ರಮವೂ ರಾತ್ರಿ 8 ಗಂಟೆಯವರೆಗೂ ನಡೆಯಿತು. ದೇವರ ನೃತ್ಯ ಪ್ರದಕ್ಷಿಣೆ ವೀಕ್ಷಿಸಲು ಅಧಿಕ ಮಂದಿ ಭಕ್ತಾದಿಗಳು ಕಿಕ್ಕಿರಿದು ನೆರೆದಿದ್ದರು.
ಸಂಕ್ರಾಂತಿ ಹಬ್ಬದ ಅಂಗವಾಗಿ ಮುತ್ತೈದೆಯರು, ಮಹಿಳೆಯರು, ಮಕ್ಕಳು, ಭಕ್ತಾದಿಗಳು, ವೃತಧಾರಿಗಳು ಬೆಳಗಿನಿಂದಲೇ ದೇವಾಲಯಕ್ಕೆ ಬಂದು ದೇವರಿಗೆ ಪೂಜೆ ಸಲ್ಲಿಸುತ್ತಿದ್ದರು.