ವೀರಾಜಪೇಟೆ, ಆ. 29: ಕೊಡಗಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಇದ್ದು, ಸರ್ಕಾರಿ ನಿಯೋಜಿತ ಕಾರ್ಯಕ್ರಮಗಳಿಗೆ ಬಳಕೆಯಾಗದೆ ನಾಗರಿಕರು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದನ್ನು ಸಮಾಜದ ಹಿತಕ್ಕಾಗಿ ಬಳಕೆ ಮಾಡುವ ಉದ್ದೇಶ ಸರ್ಕಾರಕ್ಕಿದೆ ಎಂದು ಜಿಲ್ಲಾಧಿಕಾರಿ ಡಾ. ವಿನ್ಸೆಂಟ್ ಡಿಸೋಜ ಹೇಳಿದರು.
ವೀರಾಜಪೇಟೆ ತಾಲೂಕು ಕಚೇರಿಯ ಅಧೀನದಲ್ಲಿರುವ ಕಂದಾಯ ಇಲಾಖೆಯ ಕಚೇರಿಯಲ್ಲಿ ವೀರಾಜಪೇಟೆ ಹೋಬಳಿ ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಟ್ಟಡ ಕಟ್ಟಲು ಮತ್ತು ಇತರ ಬಳಕೆಗಾಗಿ ಸರ್ಕಾರಿ ಜಮೀನು ಒತ್ತುವರಿಯಾಗಿದೆ ಇದು ಕಾನೂನಿಗೆ ವಿರುದ್ಧವಾಗಿದೆ. ಸಮಾಜ ಮುಖಿ ಕಾರ್ಯಕ್ರಮಗಳಾದ ಕಸ ವಿಲೇವಾರಿ ಮಾಡಲು ಸೂಕ್ತ ಸ್ಥಳದ ಕೊರತೆ, ಸಾರ್ವಜನಿಕರಿಗಾಗಿ ಬಳಸಲ್ಪಡುವ ಸ್ಮಶಾನ, (ರುದ್ರಭೂಮಿ) ನಿರ್ಗತಿಕರಿಗೆ ನಿವೇಶನ, ಸರ್ಕಾರಿ ಕಟ್ಟಡ ಕಟ್ಟಲು ನಿವೇಶನ, ಅಂಗನವಾಡಿ ಕಟ್ಟಡ ಮುಂತಾದವುಗಳಿಗೆ ಸೂಕ್ತವಾದ ಸ್ಥಳವಿಲ್ಲದೆ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಹಂತ ಹಂತವಾಗಿ ಒತ್ತುವರಿ ಮಾಡಿಕೊಂಡಿರುವ ಸರ್ಕಾರಿ ಜಮೀನನ್ನು ಸರ್ವೇ ಮಾಡಿಸಿ ಸರ್ಕಾರವು ಸ್ವಾಧೀನ ಪಡಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಾರ್ವಜನಿಕರು ಸಹಕರಿಸಿದರೆ ಸರ್ಕಾರದ ಜನಪರ ಕಾರ್ಯಕ್ರಮಗಳಿಗೆ ಸರ್ಕಾರಿ ಜಮೀನನ್ನು ಬಳಕೆ ಮಾಡಬಹುದಾಗಿದೆ ಎಂದು ಹೇಳಿದರು.
ತಾಲೂಕು ಪಂಚಾಯಿತಿ ಸದಸ್ಯ ಪ್ರಶಾಂತ್ ಉತ್ತಪ್ಪ ಮಾತನಾಡಿ ನೆರೆಯ ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯದ ಗಡಿ ಪ್ರದೇಶವಾದ ಮಾಕುಟ್ಟ್ಟದಲ್ಲಿ ತಪಾಸಣಾ ಕೇಂದ್ರವಿದ್ದರೂ ದಿನಂಪ್ರತಿ ನೂರಾರು ವಾಹನಗಳು ಜೆಲ್ಲಿ, ಕಲ್ಲು, ಕೆಂಪು ಕಲ್ಲು ಮತ್ತು ಮರಳು ತುಂಬಿಕೊಂಡು ಕೊಡಗು ಜಿಲ್ಲೆಗೆ ಆಗಮಿಸುತ್ತಿದೆ. ಇದರಲ್ಲಿ ವಾಹನದ ಸಾಮಥ್ರ್ಯಕ್ಕಿಂತ ಹೆಚ್ಚು ಸರಕುಗಳನ್ನು ತುಂಬಿಕೊಂಡು ಬರಲಾಗುತ್ತಿದೆ ಇದರಿಂದ ರಸ್ತೆಗಳು ಹಾಳಾಗುತ್ತಿದೆ ಎಂದು ದೂರಿದರು.
ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಮಾತನಾಡಿ, ವೀರಾಜಪೇಟೆ ಹೋಬಳಿಯಲ್ಲಿ ನಿರಂತರ ಕಾಡಾನೆಗಳ ಧಾಳಿಯಿಂದ ರೈತರು ಕಂಗಾಲಾಗಿದ್ದಾರೆ. ಆದುದರಿಂದ ಅರಣ್ಯ ಪ್ರದೇಶದÀ ಅಂಚಿನಲ್ಲಿರುವ ಈಗಿರುವ ಆನೆ ಕಂದಕವನ್ನು ಅಗಲೀಕರಣಗೊಳಿಸಬೇಕು ಎಂದರು. ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಗ್ರಾಮೀಣ ಜನತೆಯು ತಮ್ಮ ಮನೆಯ ಕಂದಾಯ ಕಟ್ಟಲು ಗ್ರಾಮ ಪಂಚಾಯಿತಿ ಕಚೇರಿಗೆ ಹೋದ ಸಂದರ್ಭದಲ್ಲಿ ದಾಖಲೆಗಳು ತಾಳೆ ಹೊಂದದೆ ಮಾಹಿತಿ ಕೊರತೆಯಿಂದ ಪಂಚಾಯಿತಿ ಕಚೇರಿ ಮತ್ತು ತಾಲೂಕು ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸಬೇಕು ಎಂದಾಗ ಜಿಲ್ಲಾಧಿಕಾರಿಗಳು ಗ್ರಾಮ ಪಂಚಾಯಿತಿ ಕಚೇರಿಗಳ ಮುಂದೆ ಮಾಹಿತಿ ಫಲಕವನ್ನು ಅಳವಡಿಸಲು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಗ್ರಾಮ ಪಂಚಾಯಿತಿ ಸದಸ್ಯ ಮಂಡೇಟಿರ ಅನಿಲ್ ಮಾತನಾಡಿ ಕೇರಳದಿಂದ ಬರುವ ಯಾವದೇ ಸರಕು ಸಾಗಿಸುವ ವಾಹನಗಳನ್ನು ತಪಾಸಣೆ ಮಾಡುವದಿಲ.್ಲ ಆದರೆ ಕೊಡಗಿನಿಂದ ಕೇರಳಕ್ಕೆ ಹೊಗುವ ವಾಹನಗಳನ್ನು ಕೇರಳ ರಾಜ್ಯದ ಸಾರಿಗೆ ಇಲಾಖೆ ಅಧಿಕಾರಿಗಳು ತಪಾಸಣೆ ಮಾಡುತ್ತಿದ್ದು, ಇಲ್ಲ ಸಲ್ಲದ ದೂರುಗಳನ್ನು ದಾಖಲಿಸಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಹೇಳಿದರು. ಇದಕ್ಕೆ ಜಿಲ್ಲೆಯ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕ್ರಗೊಳ್ಳುವದಾಗಿ ಜಿಲ್ಲಾಧಿಕಾರಿಗಳು ಸಭೆಗೆ ತಿಳಿಸಿದರು.
ಸಭೆಯಲ್ಲಿ 12 ಮಂದಿ ಫಲಾನುಭವಿಗಳಿಗೆ ಪಿಂಚಣಿ ಆದೇಶದ ಪ್ರತಿಗಳನ್ನು ಜಿಲ್ಲಾಧಿಕಾರಿಗಳು ವಿತರಿಸಿದರು. ಸಭೆಯಲ್ಲಿ ಹೋಬಳಿಯ ವಿವಿಧೆಡೆಗಳಿಂದ ಆಗಮಿಸಿದ್ದ ಸಾರ್ವಜನಿಕರಿಂದ ಕಂದಾಯ ಇಲಾಖೆಗೆ ಸಂಬಂಧಿಸಿದ ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಸಾರ್ವಜನಿಕ ಕುಂದುಕೊರತೆಗಳ ಬಗ್ಗೆ ಅರ್ಜಿ ಸ್ವೀಕರಿಸಲಾಯಿತು.
ಸಭೆಯಲ್ಲಿ ತಾಲೂಕು ಪಂಚಾಯಿತಿ ಸದಸ್ಯ ಬಿ.ಎಂ. ಗಣೇಶ್, ಜಿಲ್ಲಾ ಉಪವಿಭಾಗಾಧಿಕಾರಿ ಡಾ. ನಂಜುಡೇಗೌಡ, ವೀರಾಜಪೇಟೆ ತಾಲೂಕು ಕಾರ್ಯನಿರ್ವಹಣಾಧಿಕಾರಿ, ಫಡ್ನೆಕರ್, ತಾಲೂಕು ತಹಶೀಲ್ದಾರ್ ಮಹದೇವ ಸ್ವಾಮಿ, ಇದ್ದರು.