ಮಡಿಕೇರಿ, ಜು. 29: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕೊಡಗು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವೀರಾಜಪೇಟೆ ಕೊಡವ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕೊಡವ ಸಾಹಿತ್ಯ ಕಲಿಕಾ ಶಿಬಿರ, ಪುಸ್ತಕ ವಿಮರ್ಶೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳು ಆಗಸ್ಟ್ 6 ಮತ್ತು 7 ರಂದು ವೀರಾಜಪೇಟೆಯಲ್ಲಿ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, 2 ದಿನಗಳ ಕಾಲ ವೀರಾಜಪೇಟೆಯ ಕೊಡವ ಸಮಾಜದಲ್ಲಿ ನಡೆಯುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದರು.
ಆ. 6 ರಂದು ಬೆಳಿಗ್ಗೆ 11 ಗಂಟೆಗೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಬಿ.ಎಸ್. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಜಂಟಿ ನಿರ್ದೇಶಕ ಎನ್. ಮಲ್ಲಿಕಾರ್ಜುನ ಸ್ವಾಮಿ, ಸಾಹಿತಿ ಹಾಗೂ ವಿಮರ್ಶಕ ಮಳಲಿ ವಸಂತ ಕುಮಾರ್, ಸಾಹಿತಿ ನಾಗೇಶ್ ಕಾಲೂರು, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಂಗಾಯಣದ ನಿವೃತ್ತ ಉಪ ನಿರ್ದೇಶಕ ಎಸ್.ಐ. ಭಾವಿಕಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಖ್ಯಾತ ಸಾಹಿತಿ ಐ.ಮಾ. ಮುತ್ತಣ್ಣ ಅವರು ಬರೆದಿರುವ ಲೇಖನವನ್ನು ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಕೊಡವ ಭಾಷೆಗೆ ಅನುವಾದಿಸಿರುವ “ದಕ್ಷಿಣ ಭಾರತತ್‍ರ ಓರ್ ಚೆರಿಯ ಆದರ್ಶ ರಾಜ್ಯ’ ಪುಸ್ತಕವನ್ನು ಇದೇ ಸಂದರ್ಭ ಬಿಡುಗಡೆ ಮಾಡಲಾಗುವದು.
ಹಿರಿಯ ಸಾಹಿತಿಗಳೊಡನೆ ಶಿಬಿರಾರ್ಥಿಗಳಿಂದ ಸಂವಾದ ಕಾರ್ಯಕ್ರಮ ನಡೆಯಲಿದೆ. ಸಾಹಿತಿಗಳಾದ ದುಂಡಿರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕೊಡವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಮೂವೇರ ರೇಖಾ ಪ್ರಕಾಶ್, ಕಾಡ್ಯಮಾಡ ರೀಟಾ ಬೋಪಯ್ಯ, ಅಮ್ಮಣಿಚಂಡÀ ಪ್ರವೀಣ್ ಚಂಗಪ್ಪ, ಅಲ್ಲಾರಂಡ ವಿಠಲ್ ನಂಜಪ್ಪ, ಮೂಕೈರಿರ ನಳಿನಾಕ್ಷಿ, ಚಟ್ಟಂಗಡ ರವಿ ಸುಬ್ಬಯ್ಯ, ತಾತಂಡ ಪ್ರಭಾ ನಾಣಯ್ಯ, ತೆನ್ನಿರ ರಾಧ ಪೊನ್ನಪ್ಪ, ಎಂ.ಇ. ಮಹಮ್ಮದ್, ಪಾಲೇರ ರಾಣಿ ಅಪ್ಪಣ್ಣ ಹಾಗೂ ಜಗದೀಶ್ ಜೋಡುಬೀಟಿ ಪಾಲ್ಗೊಳ್ಳಲಿದ್ದಾರೆ.
ಕೊಡವ ಸಾಹಿತ್ಯ ಪಡಿಪು ಶಿಬಿರದಲ್ಲಿ ಬಾಚರಣಿಯಂಡ ಪಿ. ಅಪ್ಪಣ್ಣ, ಉಳ್ಳಿಯಡ ಡಾಟಿ ಪೂವಯ್ಯ ಹಾಗೂ ಐತಿಚಂಡ ರಮೇಶ್ ಉತ್ತಪ್ಪ ಶಿಬಿರಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ. ಸಂಜೆ ನಡೆಯುವ ಕೊಡವ ಪಾಟ್ ಪಡಿಪು ಕಾರ್ಯಕ್ರಮವನ್ನು ಜಾನಪದ ತಜ್ಞ ನಾಯಡ ವಾಸು ನಂಜಪ್ಪ ಉದ್ಘಾಟಿಸಲಿದ್ದಾರೆ.
ಆ. 7 ರಂದು ನಡೆಯುವ ಕೊಡವ ಸಾಹಿತ್ಯ ಶಿಬಿರಕ್ಕೆ ಬೆಳಿಗ್ಗೆ 10.30 ಕ್ಕೆ ಚಾಲನೆ ದೊರೆಯಲಿದೆ. ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ವಕೀಲ ಕೆ.ಪಿ. ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕಾರ್ಯದರ್ಶಿ ಕುಲ್ಲಚಂಡ ಜಯ ಪೂಣಚ್ಚ, ಕ್ಷೇಮಾಭಿವೃದ್ಧಿ ನಿಧಿಯ ಅಧ್ಯಕ್ಷ ಸಣ್ಣುವಂಡ ಎಂ. ಚಂಗಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಬಿ.ಎಸ್. ತಮ್ಮಯ್ಯ ಮಾಹಿತಿ ನೀಡಿದರು.
ಎಲ್ಲಾ ಭಾಷಿಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕೊಡವ ಭಾಷೆ ಸಾಹಿತ್ಯ, ಸಂಸ್ಕøತಿ ಜನಪದ ಕಲೆಗಳನ್ನು ಪರಿಚಯಿಸುವ ಉದ್ದೇಶದಿಂದ ಕಲಿಕಾ ಶಿಬಿರವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಸಂಸ್ಕøತಿಗಳ ಸಾಕ್ಷ್ಯ ಚಿತ್ರಗಳನ್ನು ಕೂಡ ಬಿಡುಗಡೆ ಮಾಡಲಾಗುವದು. ಕೆಂಬಟ್ಟಿ ಹಾಗೂ ಕುಡಿಯ ಜನಾಂಗದ ಸಾಕ್ಷ್ಯ ಚಿತ್ರ ಪ್ರಮುಖವಾಗಿದೆ ಎಂದು ಬಿ.ಎಸ್. ತಮ್ಮಯ್ಯ ಹೇಳಿದರು.
ಗೋಷ್ಠಿಯಲ್ಲಿ ಅಕಾಡೆಮಿಯ ಸದಸ್ಯ ಮಾದೇಟಿರ ಬೆಳ್ಯಪ್ಪ, ವೀರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ವಾಂಚಿರ ನಾಣಯ್ಯ, ಕಾರ್ಯದರ್ಶಿ ಕುಲ್ಲಚಂಡ ಜಯ ಪೂಣಚ್ಚ, ಪತ್ರಕರ್ತರ ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಹಾಗೂ ಕಾರ್ಯಕ್ರಮದ ಸಂಚಾಲಕ ಐತಿಚಂಡ ರಮೇಶ್ ಉತ್ತಪ್ಪ ಉಪಸ್ಥಿತರಿದ್ದರು.