ವೀರಾಜಪೇಟೆ, ಜೂ. 18: ವಿದ್ಯಾರ್ಥಿಗಳು ಪಾಠದೊಂದಿಗೆ ದಿನನಿತ್ಯದ ಕಾನೂನು ತಿಳಿದು ಕೊಳ್ಳುವಂತಾಗಬೇಕು. ಮುಂದೆ ಕಾನೂನು ಪ್ರತಿಯೊಬ್ಬರಿಗೂ ರಕ್ಷಣೆ ನೀಡುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿ ಮೋಹನ್ ಪ್ರಭು ಹೇಳಿದರು.
ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಆಶ್ರಯದಲ್ಲಿ ವೀರಾಜಪೇಟೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿದ ಬಳಿಕ ಮಾತನಾಡಿ, ‘ವಿದ್ಯೆಯೇ ಶ್ರೇಷ್ಠ ಸಂಪತ್ತು, ಹೆಣ್ಣೊಂದು ಕಲಿತರೆ ಕುಟುಂಬವೇ ಕಲಿತಂತೆ, ವಿದ್ಯೆಯಿಂದಲೇ ಪ್ರಗತಿ ಸಾಧ್ಯ, ಪರಿಸರ ದಿಂದ ಮೂಲಭೂತ ಸೌಕರ್ಯಗಳನ್ನು ಪಡೆದುಕೊಳ್ಳುವ ನಾವುಗಳು ಪರಿಸರವನ್ನು ರಕ್ಷಿಸುವದು ನಮ್ಮೆಲ್ಲರ ಕರ್ತವ್ಯ. ಹಿಂದಿನವರು ಅರಳಿ ಮರದ ಬುಡದಲ್ಲಿ ಕುಳಿತು ನ್ಯಾಯ ತೀರ್ಮಾನ ಮಾಡುತ್ತಿದ್ದರು.
ಆದರೆ ಇಂದು ಅನೇಕ ಕಾನೂನುಗಳು ಬಂದಿರುವದರಿಂದ ರಾಜ್ಯದಿಂದ ರಾಷ್ಟ್ರಮಟ್ಟದವರೆಗೂ ಕಾನೂನಿನ ಅರಿವು ಅಗತ್ಯ’ ಎಂದ ಮೋಹನ್ ಪ್ರಭು ಯಾವದೇ ಸಮಸ್ಯೆಗಳು ತಲೆದೋರಿದಲ್ಲಿ ರಾಜಿ ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳ ಬಹುದಾಗಿದೆ ಎಂದರು.
ಕಾವೇರಿ ಶೈಕ್ಷಣಿಕ ಸಂಘದ ಕೆ.ಜಿ. ಉತ್ತಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಕಾನೂನು ತಿಳಿದುಕೊಂಡರೆ ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಲು ಸಾಧ್ಯವಾಗುತ್ತದೆ ಎಂದರು. ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಆರ್. ಜಯಪ್ರಕಾಶ್ ಮಾತನಾಡಿ, ನಾವು ಕಾನೂನನ್ನು ರಕ್ಷಣೆ ಮಾಡಿದಲ್ಲಿ ಅದು ನಮ್ಮನ್ನು ರಕ್ಷಣೆ ಮಾಡುತ್ತದೆ ಎಂದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎನ್.ಜಿ. ಕಾಮತ್, ಕಾರ್ಯದರ್ಶಿ ಬಿ.ಎನ್. ಸುಬ್ಬಯ್ಯ ಉಪಸ್ಥಿತರಿದ್ದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲ ಬಿ.ಬಿ. ಮಾದಪ್ಪ ಅವರು ‘ರ್ಯಾಗಿಂಗ್ ತಡೆಗಟ್ಟುವಿಕೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರಲ್ಲದೆ, ಸಾಕ್ಷ್ಯಚಿತ್ರ ತೋರಿಸಿದರು. ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎನ್.ಎಂ. ನಾಣಯ್ಯ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಸಿ.ಎಂ. ರೇವತಿ ಹಾಗೂ ಕೆ.ಜಿ. ವೀಣಾ ನಿರೂಪಿಸಿ ಡಾ. ರೇಖಾ ಚಿಣ್ಣಪ್ಪ ವಂದಿಸಿದರು.