ವೀರಾಜಪೇಟೆ, ಆ. 24: ಅತಿ ಸೂಕ್ಷ್ಮ ಪ್ರದೇಶ ವೀರಾಜಪೇಟೆಯಲ್ಲಿ ನಾಡ ಹಬ್ಬ ಗೌರಿ ಗಣೇಶ ಉತ್ಸವವನ್ನು ಸೌಹಾರ್ದ ಹಾಗೂ ಪ್ರೀತಿ ವಿಶ್ವಾಸದಿಂದ ಆಚರಿಸಬೇಕು ಎಂದು ಎಂದು ವೀರಾಜಪೇಟೆ ಡಿವೈಎಸ್ಪಿ ನಾಗಪ್ಪ ಹೇಳಿದರು.ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗೌರಿ ಗಣೇಶ ಉತ್ಸವದ ಅಂಗವಾಗಿ ವಿವಿಧ ಸಮಿತಿಗಳ ಸಭೆಯಲ್ಲಿ ಮಾತನಾಡಿ ಕಳೆದ ಬಾರಿಯಂತೆ ಈ ಬಾರಿ ಕೂಡ ನಾಡ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವಂತಾಗಬೇಕು. ಯಾವದೇ ಅಹಿತಕರ ಘಟನೆಗೆ ಅವಕಾಶ ನೀಡಬಾರದು. ಹಬ್ಬ ಹಾಗೂ ಶೋಭಾಯಾತ್ರೆಯ ವಿಚಾರದಲ್ಲಿ ಪೊಲೀಸ್ ಇಲಾಖೆ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಿ ಇತರರಿಗೆ ಮಾರ್ಗದರ್ಶಕರಾಗಬೇಕು. ಉತ್ಸ್ಸವ ಸಮಿತಿಗಳು ಮತ್ತು ಸಾರ್ವಜನಿಕರು ಇಲಾಖೆಗೆ ಸಹಕಾರ ನೀಡಬೇಕು ಎಂದು ಹೇಳಿದರು.

ವೃತ್ತ ನಿರೀಕ್ಷಕ ಶಾಂತಮಲ್ಲಪ್ಪ ಮಾತನಾಡಿ; ಲೋಕೋಪಯೋಗಿ ಇಲಾಖೆ ಮತ್ತು ಪಟ್ಟಣ ಪಂಚಾಯಿತಿ ಶೋಭಾಯಾತ್ರೆ ನಡೆಯುವ ರಸ್ತೆಗಳಲ್ಲಿ ಗುಂಡಿಗಳನ್ನು ಮುಚ್ಚಿ ಸರಿಪಡಿಸುವಂತೆ ಮನವಿ ಮಾಡಿದರು. ಇಲಾಖೆಯ ಆದೇಶದಂತೆ ಗಣಪತಿ ಪ್ರತಿಷ್ಠಾಪನಾ ಸಮಿತಿಗಳು ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಗಣಪತಿ ವಿಸರ್ಜನಾ ದಿನದಂದು ಮೆರವಣಿಗೆ ಸ್ಥಳದಲ್ಲಿ ಡಾಲ್‍ಬಿ ಡಿ.ಜೆ. ಮತ್ತು ಲೇಸರ್ ಲೈಟ್‍ಗಳನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ. ಕೇವಲ 5 ಸ್ಪೀಕರ್‍ಗಳನ್ನು ಒಳಗೊಂಡಂತೆ 6 ಸಾವಿರದಿಂದ 7 ಸಾವಿರ ವ್ಯಾಟ್ ಸಾಮಥ್ರ್ಯದ ಸೌಂಡ್ ಸಿಸ್ಟಮ್‍ಗಳನ್ನು ಬಳಸಬಹುದಾಗಿದೆ. ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ಎರಡು ದಿನ ಮುಂಚಿತವಾಗಿ ಇಲಾಖೆಯಿಂದ ಪರವಾನಿಗೆ ಪಡೆದುಕೊಳ್ಳಬೇಕು. ಧ್ವನಿವರ್ಧಕ ಅಳವಡಿಸಲು ಸಮಕ್ಷಮ ಪ್ರಾಧಿಕಾರದಿಂದ ಮೈಕ್ ಲೈಸನ್ಸನ್ನು ಪಡೆದುಕೊಳ್ಳಬೇಕು. ಎಲ್ಲಾ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ರಾತ್ರಿ 10 ಗಂಟೆಯೊಳಗೆ ಕೊನೆಗೊಳಿಸಬೇಕು. ಅಶ್ಲೀಲ ಹಾಡುಗಳು ಮತ್ತು ಶಬ್ದಗಳು ಹಾಗೂ ಧರ್ಮಕ್ಕೆ ವಿರುದ್ಧವಾದ ಮಾತುಗಳನ್ನು ಉಪಯೋಗಿಸಬಾರದು. ಸಿಡಿಮದ್ದುಗಳನ್ನು ಸಿಡಿಸುವಾಗ ಅನ್ಯ ಮತದವರಿಗೆ ಮತ್ತು ದೇವಸ್ಥಾನ, ಚರ್ಚ್, ಮಸೀದಿಗಳಿಗೆ ತೊಂದರೆಯಾಗದ ರೀತಿಯಲ್ಲಿ 50 ಮೀಟರ್ ದೂರದಲ್ಲಿ ಪಟಾಕಿ ಸಿಡಿಸುವ ಬಗ್ಗೆ ಜಾಗೃತಿ ವಹಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಸೆಸ್ಕಾಂ, ಲೋಕೋಪಯೋಗಿ ಇಲಾಖೆ, ಆರೋಗ್ಯ ಇಲಾಖೆ ಹಾಗೂ 20 ಸಮಿತಿಗಳ ಸದಸ್ಯರು ಭಾಗವಹಿಸಿದ್ದರು. ನಗರ ಠಾಣಾಧಿಕಾರಿ ಸುಬ್ರಮಣ್ಯ ಸ್ವಾಗತಿಸಿ, ವಂದಿಸಿದರು.