ಸೋಮವಾರಪೇಟೆ, ಅ.22: ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತಗೊಂಡಿರುವ ಅಜ್ಜಳ್ಳಿ ರವಿ ಅವರು ಕೊಡಗು ಜಿಲ್ಲೆಯ ವೀರಶೈವ ಸಮಾಜದಲ್ಲಿ ಗೊಂದಲ ಮೂಡಿಸುವ ಹೇಳಿಕೆಗಳನ್ನು ನೀಡುತ್ತಿರುವದು ಖಂಡನೀಯ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಡಿ.ಬಿ. ಧರ್ಮಪ್ಪ ಹೇಳಿದರು.ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡ್ಲಿಪೇಟೆಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ನಡೆದ ಧಾರ್ಮಿಕ ಸಮಾವೇಶ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದ್ದರೂ, ಕಾರ್ಯಕ್ರಮದ ಕುರಿತು ಕಾಂಗ್ರೆಸ್ ವಕ್ತಾರರೆಂದು ಹೇಳಿಕೊಳ್ಳುವ ಅಜ್ಜಳ್ಳಿ ರವಿ ಎಂಬವರು ಕಪೋಲಕಲ್ಪಿತ ಹೇಳಿಕೆಗಳನ್ನು ನೀಡಿರುವದು ಖಂಡನೀಯ. ಇದು ವೀರಶೈವ ಸಮಾಜದಲ್ಲೂ ರಾಜಕೀಯ ಬೆರೆಸಿ ಗೊಂದಲ ಸೃಷ್ಟಿಸುವ ಹೇಳಿಕೆಯಾಗಿದೆ ಎಂದರು.

ಕೊಡ್ಲಿಪೇಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯಾವದೇ ಪಕ್ಷ ಭೇದವಿಲ್ಲದೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಮುಖಂಡರುಗಳು, ರಾಜಕೀಯ ನಾಯಕರುಗಳು ಪಾಲ್ಗೊಂಡಿದ್ದಾರೆ. ವೀರಶೈವ ಸಮಾಜ ಬಾಂಧವರು ಎಲ್ಲ ರಾಜಕೀಯ ಪಕ್ಷಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ವಕ್ತಾರರಾಗಿರುವ ಅಜ್ಜಳ್ಳಿ ರವಿ ಎಂಬವರು ಕಾರ್ಯಕ್ರಮಕ್ಕೆ ಆಗಮಿಸಿದ್ದ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಅವರನ್ನು ಕುರಿತು, ಅವರಿಂದ ವೀರಶೈವ ಸಮಾಜಕ್ಕೆ ಯಾವದೇ ಉಪಯೋಗವಾಗಿಲ್ಲ ಎಂಬ ಹೇಳಿಕೆಗಳನ್ನು ನೀಡಿರುವದು ಖಂಡನೀಯ. ಈ ಹೇಳಿಕೆಯನ್ನು ವೀರಶೈವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಎಂದರು. ಅಜ್ಜಳ್ಳಿ ರವಿ ಕಾಂಗ್ರೆಸ್ ಪಕ್ಷದ ವಕ್ತಾರರೇ ಹೊರತು ವೀರಶೈವ ಸಮಾಜದ ವಕ್ತಾರರಲ್ಲ. ಅವರು ಸಮಾಜದ ಬಗ್ಗೆ ಹೇಳಿಕೆ ನೀಡುವಾಗ ಸಮಿತಿ ಸಭೆಯಲ್ಲಿ ಚರ್ಚಿಸಬೇಕಾಗಿತ್ತು. ಆದರೆ ಏಕಾಏಕಿ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಗೊಂದಲ ಮೂಡಿಸಿರುವದು ಸರಿಯಲ್ಲ. ಅಜ್ಜಳ್ಳಿ ರವಿ ಅವರು ವೀರಶೈವ ಸಮಾಜಕ್ಕೆ ನೀಡಿರುವ ಕೊಡುಗೆ ಏನೆಂದು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಗೋಷ್ಠಿಯಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿ ಸದಸ್ಯ ನಂಜುಂಡಸ್ವಾಮಿ, ಮಹಾಸಭಾದ ಸೋಮವಾರಪೇಟೆ ತಾಲೂಕು ಘಟಕದ ಅಧ್ಯಕ್ಷ ಸಿ.ವಿ. ವಿಶ್ವನಾಥ್, ವೀರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ಸಂದೀಪ್, ಖಜಾಂಚಿ ಎಸ್.ಎಂ. ರಾಜೇಂದ್ರ ಪ್ರಸಾದ್ ಉಪಸ್ಥಿತರಿದ್ದರು.