ಮಡಿಕೇರಿ, ಮೇ 31: ವಿಧಾನ ಸಭೆಯಿಂದ ವಿಧಾನ ಪರಿಷತ್ ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಎರಡು ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ನಿನ್ನೆ ರಾಜ್ಯ ಹಾಗೂ ಜಿಲ್ಲೆಯ ಕಾಂಗ್ರೆಸ್ ಪ್ರಮುಖರೊಂದಿಗೆ ಒಂದು ನಾಮಪತ್ರ ಸಲ್ಲಿಸಿದ್ದ ಅವರು, ಇಂದು ಮತ್ತೊಂದು ಪ್ರತಿಯೊಂದಿಗೆ ಎರಡನೇ ನಾಮಪತ್ರ ಸಲ್ಲಿಸಿದ್ದಾರೆ.

ನಿನ್ನೆ ನಾಮಪತ್ರ ಸಲ್ಲಿಕೆ ಸಂದರ್ಭ ಕೆಪಿಸಿಸಿ ರಾಜ್ಯಾಧ್ಯಕ್ಷ ಡಾ. ಜಿ. ಪರಮೇಶ್ವರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಮತ್ತಿತರೊಂದಿಗೆ ವೀಣಾ ಅಚ್ಚಯ್ಯ ಇದ್ದ ಸಂದರ್ಭ ಚುನಾವಣಾಧಿಕಾರಿ ಸಮ್ಮುಖದಲ್ಲಿ ಜೆಡಿಎಸ್ ಅಭ್ಯರ್ಥಿಯ ಪರವಾಗಿ ಆಗಮಿಸಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಹೆಚ್.ಡಿ. ರೇವಣ್ಣ, ಜಿ.ಟಿ. ದೇವೇಗೌಡ ಅವರುಗಳು ಮುಖಾಮುಖಿಯಾದರು. ಈ ಸಂದರ್ಭ ಹಾಸ್ಯಭರಿತವಾಗಿ ಎರಡು ಪಕ್ಷಗಳ ಪ್ರಮುಖರು ಉಭಯ ಕುಶಲೋಪರಿ ನಡೆಸಿದ ಸಂದರ್ಭವಿದು.