ಮಡಿಕೇರಿ, ಸೆ. 17: ತಾ. 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳು ಸಂಘ-ಸಂಸ್ಥೆಯ ಪ್ರತಿನಿಧಿಗಳು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಸಭಾಂಗಣ ದಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಡಿಕೇರಿಯಲ್ಲಿ ತಾ. 27 ರಂದು ವಿಶ್ವ ಪ್ರವಾಸೋದ್ಯಮ ದಿನಾಚರಣೆಯನ್ನು ಹಮ್ಮಿಕೊಂಡಿದ್ದು, ಇದರಂತೆ ಇಲಾಖೆ ಹಾಗೂ ವಿವಿಧ ಸಂಸ್ಥೆಗಳು ಕೈಜೋಡಿಸಿ ಜಾಗತಿಕ ಪ್ರವಾಸೋದ್ಯಮ ಸೌಲಭ್ಯಗಳ ಲಭ್ಯತೆಗೆ ಉತ್ತೇಜನ” ಸಂದೇಶದೊಂದಿಗೆ ದಿನಾಚರಣೆ ಯನ್ನು ಆಯೋಜಿಸುವಂತೆ ಆಗಬೇಕು ಎಂದರು. ವಿಶ್ವ ಪ್ರವಾಸೋದ್ಯಮ ರಾಜರ ಗದ್ದುಗೆ ಹಾಗೂ ಜಿಲ್ಲೆಯ ಇತರೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕೈಗೊಂಡು ಪ್ರವಾಸಿ ತಾಣಗಳನ್ನು ಅಲಂಕರಿಸು ವಂತೆ ಆಗಬೇಕು. ಹಾಗೆಯೇ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಅದರಂತೆ ಪ್ಲಾಸ್ಟಿಕ್ ಬಳಕೆಯನ್ನು ನಿಯಂತ್ರಿಸಿ ಪರಿಸರವನ್ನು ಉಳಿಸಿಕೊಳ್ಳಬೇಕು ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಸುವವರು ಕಂಡುಬಂದಲ್ಲಿ ದಂಡವನ್ನು ವಿಧಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಜಿಲ್ಲೆಯ ಇತರ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳ ವತಿಯಿಂದ ಸ್ವಚ್ಛತಾ ಕಾರ್ಯಾಗಾರವನ್ನು ಕೈಗೊಳ್ಳುವಂತಾಗಬೇಕು. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಗಳ ವತಿಯಿಂದ ಹತ್ತಿರದ ಜನಪ್ರತಿನಿಧಿ ಗಳು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳ ಸಹಯೋಗ ದೊಂದಿಗೆ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.

ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಸಿ. ಜಗನ್ನಾಥ್ ಮಾಹಿತಿ ನೀಡಿ, ಪ್ರವಾಸೋದ್ಯಮ ದಿನದ ಪ್ರಯುಕ್ತ ಎನ್.ಐ.ಸಿ. ಅವರ ಮೂಲಕ ವೆಬ್‍ಸೈಟ್ ಲಾಂಚ್ ಮಾಡಿ ಆನ್‍ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಲು ಅವಕಾಶವನ್ನು ಕಲ್ಪಿಸ ಬೇಕೆಂದು ಜಿಲ್ಲಾಧಿಕಾರಿ ಯವರಲ್ಲಿ ಕೋರಿದರು. ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜ್ ಟೂರಿಸ್ಟ್ ಅಂಡ್ ಟ್ರಾವೆಲ್ ಮ್ಯಾನೆಜ್‍ಮೆಂಟ್ ವಿದ್ಯಾರ್ಥಿಗಳಿಂದ ಸಾಫ್ಟ್‍ವೇರ್ ಅಭಿವೃದ್ಧಿ ಪಡಿಸಿ ಕೊಡುವಂತೆ ಸಭೆಯ ಗಮನಕ್ಕೆ ತಂದರು. ಹೋಂ-ಸ್ಟೇ ನಿರ್ವಹಣೆ ಹಾಗೂ ನಿಯಂತ್ರಣದ ಮಾನದಂಡನೆಗಳ ಕುರಿತು ಪರಿಚಯಿಸುವದು ಮತ್ತಿತರ ಚರ್ಚೆ ನಡೆಯಿತು. ಜಿಲ್ಲಾ ಟ್ರಾವೆಲ್ ಏಜೆಂಟ್ಸ್ ಅಸೋಸಿಯೆಷನ್‍ನ ಅಧ್ಯಕ್ಷ ಸತ್ಯ ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಕಕ್ಕಬೆ ಶ್ರೀ ಇಗ್ಗುತಪ್ಪ ದೇವಸ್ಥಾನ, ನಾಲ್ಕುನಾಡು ಅರಮನೆ ಹಾಗೂ ಚೇಲಾವರ ಜಲಪಾತ ಪ್ರವಾಸಿ ತಾಣಗಳಿಗೆ ಉಚಿತ ಪ್ರವಾಸ ಕೈಗೊಳ್ಳಲು ಏರ್ಪಡಿಸುವಂತೆ ಆಗಬೇಕು. ಹಾಗೆಯೇ ನಾಲ್ಕುನಾಡು ಅರಮನೆ, ರಾಜರ ಗದ್ದುಗೆ ಹಾಗೂ ಜಿಲ್ಲೆಯ ಇತರೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ರಜಾ ದಿನಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೈಗೊಳ್ಳುವಂತೆ ಆಗಬೇಕು ಎಂದರು.

ಸಭೆಯಲ್ಲಿ ಉಪವಿಭಾಗಾಧಿಕಾರಿ ಗಳಾದ ಡಾ. ನಂಜುಂಡೇಗೌಡ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್. ಬಸವರಾಜು, ನಗರಸಭೆ ಆಯುಕ್ತೆ ಬಿ.ಬಿ. ಪುಷ್ಪಾವತಿ, ಮಡಿಕೇರಿ ತಹಶೀಲ್ದಾರ್ ಕುಸುಮ ಮತ್ತಿತರರು ಉಪಸ್ಥಿತರಿದ್ದರು.