ಗೋಣಿಕೊಪ್ಪಲು, ಆ. 13: ವಿಶ್ವ ಛಾಯಾಚಿತ್ರ ಗ್ರಾಹಕರ ದಿನಾಚರಣೆ ಅಂಗವಾಗಿ ಕಾಲ್ಚೆಂಡು ಪಂದ್ಯಾಟ ಹಾಗೂ ಛಾಯಾಚಿತ್ರ ಸ್ಪರ್ಧೆ ನಡೆಯಲಿದೆ ಎಂದು ವೀರಾಜಪೇಟೆ ತಾಲೂಕು ಛಾಯಾಚಿತ್ರ ಗ್ರಾಹಕರ ಸಂಘದ ಅಧ್ಯಕ್ಷ ಶಿವಕುಮಾರ್ ತಿಳಿಸಿದ್ದಾರೆ.
ತಾ. 17 ರಿಂದ 3 ದಿನಗಳ ಕಾಲ ಗೋಣಿಕೊಪ್ಪ ಪ್ರಾಥಮಿಕ ಶಾಲಾ ಮೈದಾನದಲ್ಲಿ ಕಾರ್ಯಕ್ರಮ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಮಟ್ಟದ ಮುಕ್ತ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ. ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು. ತಾ. 19 ರಂದು ಫೈನಲ್ ಕಾಲ್ಚೆಂಡು ಪಂದ್ಯ ಹಾಗೂ ಚಾಯಾಚಿತ್ರಗ್ರಾಹಕ ಸಂಘದ ಸದಸ್ಯರಿಂದ ಪ್ರದರ್ಶನ ಪಂದ್ಯ ನಡೆಯಲಿದೆ. ಪಂದ್ಯಾಟದಲ್ಲಿ ಉಳಿಯುವ ಹಣವನ್ನು ವೃದ್ದರ ಆಶ್ರಯ ಸೇವಾ ಕೇಂದ್ರಗಳಿಗೆ ನೀಡುವ ಉದ್ದೇಶ ಹೊಂದಲಾಗಿದೆ ಎಂದರು.
ಜಿಲ್ಲಾಧ್ಯಕ್ಷ ಡಾಡು ಜೋಸೆಫ್ ಮಾತನಾಡಿ, 19 ರಂದು ನಡೆಯುವ ಛಾಯಾಚಿತ್ರ ಪೈಪೋಟಿಯಲ್ಲಿ ನೂರಾರು ಚಿತ್ರಗಳು ಪ್ರದರ್ಶಿಸಲ್ಪಡಲಿವೆ. ಮದುವೆ ಮನೆ ಹಾಗೂ ಮಳೆ, ಪ್ರಕೃತಿ ಸೌಂದರ್ಯದ ಚಿತ್ರಗಳನ್ನು ಸ್ಪರ್ಧೆ ಇಡುವಂತೆ ಹೇಳಲಾಗಿದೆ. ಎಲ್ಲಾ ಛಾಯಾಚಿತ್ರ ಗ್ರಾಹಕರನ್ನು ಒಂದೆಡೆ ಸೇರಿಸುವ ಸಲುವಾಗಿ ಜಿಲ್ಲೆಯಲ್ಲಿರುವ 5 ಛಾಯಾಚಿತ್ರ ಗ್ರಾಹಕರ ಸಂಘಗಳು ಪಾಲ್ಗೊಳ್ಳಲಿವೆ. ಅಂದು ಹಿರಿಯ ಛಾಯಾಚಿತ್ರಗಾರರನ್ನು ಸನ್ಮಾನಿಸಲಾಗುವದು ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ರಾಜ, ಖಜಾಂಜಿ ಸುರೇಶ್, ಸಹಕಾರ್ಯದರ್ಶಿ ಹರ್ಷ ಶೆಟ್ಟಿ ಉಪಸ್ಥಿತರಿದ್ದರು.