ಶನಿವಾರಸಂತೆ, ಡಿ. 14: ಹೊಳೆ ನೀರು ಸರಬರಾಜು, ಆಟೋ ನಿಲುಗಡೆ ಸಮಸ್ಯೆ, ಸೀಮೆಎಣ್ಣೆ ಕಾಳಸಂತೆ ಮಾರಾಟ, ವಿದ್ಯುತ್ ಸಮಸ್ಯೆ, ಸಂತೆ ಮಾರುಕಟ್ಟೆ, ರಸ್ತೆ ಬದಿ ವಾಹನಗಳ ನಿಲುಗಡೆಯಿಂದ ಸಮಸ್ಯೆ, ಮುಕ್ತಿಧಾಯ ಅಭಿವೃದ್ಧಿ, ಆರೋಗ್ಯ ಕೇಂದ್ರಕ್ಕೆ ಮಹಿಳಾ ವೈದ್ಯರನ್ನು ನೇಮಿಸಿ, ಬೀದಿನಾಯಿ ಹಾವಳಿ ತಪ್ಪಿಸಿ, ಸಂತೆ ಸುಂಕ ಸೇರಿದಂತೆ ವಿವಿಧ ಸಮಸ್ಯೆಗಳು ಗ್ರಾಮ ಸಭೆಯಲ್ಲಿ ಪ್ರಸ್ತಾಪವಾಯಿತು.

ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸಮಸ್ಯೆಗಳನ್ನು ಉಲ್ಲೇಖಿಸಿದ ಗ್ರಾಮಸ್ಥರು ಪರಿಹಾರಕ್ಕೆ ಆಗ್ರಹಿಸಿದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪುಟ್ಟರಾಜ್ ಮಾತನಾಡಿ, ಆರೋಗ್ಯ ಕೇಂದ್ರದಲ್ಲಿ ವಾರಕ್ಕೆ 3 ದಿನ ಮಹಿಳಾ ವೈದ್ಯೆ ಭೇಟಿಗೆ ವ್ಯವಸ್ಥೆ ಮಾಡಲಾಗುವದು. ಸಂತೆ ಮಾರುಕಟ್ಟೆ ರಸ್ತೆ ದುರಸ್ತಿಗೆ ಜಿ.ಪಂ. ಕ್ರಿಯಾ ಯೋಜನೆಯಡಿ ಪ್ಯಾಕೇಜ್ ರೂಪಿಸಲಾಗುವದು ಎಂದರು.

ತಾ.ಪಂ. ಸದಸ್ಯ ಬಿ.ಎಸ್. ಅನಂತಕುಮಾರ್ ಮಾತನಾಡಿ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ವಾಣಿಜ್ಯ ಸಂಕೀರ್ಣ ಕಟ್ಟಡದಲ್ಲಿ ಪೈಸಾರಿ ಜಾಗವನ್ನು ಸ್ವಾಧೀನ ಪಡೆಯಲು ಡಿ.ಸಿ.ಗೆ ಮನವಿ ಸಲ್ಲಿಸಬೇಕು. ಹೊಸ ಬಸ್ ನಿಲ್ದಾಣ ನಿರ್ಮಾಣಕ್ಕೂ ಮನವಿ ಸಲ್ಲಿಸಲಾಗಿದೆ ಎಂದರು

ಕ್ಷೇತ್ರ ಸಮನ್ವಯ ಅಧಿಕಾರಿ ಮಾಲತಿ ನೋಡೆಲ್ ಅಧಿಕಾರಿಯಾಗಿ ಭಾಗವಹಿಸಿದ್ದರು ಅಧ್ಯಕ್ಷತೆ ವಹಿಸಿದ್ದ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್ ಮಾತನಾಡಿ, ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಹೊಳೆ ನೀರು ಶುದ್ದೀಕರಣ ಘಟಕ ವಾರದಲ್ಲಿ ಉದ್ಘಾಟನೆಯಾಗಲಿದೆ. ಶೌಚಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೂ ಚಾಲನೆ ನೀಡಲಾಗಿದೆ. ಸಾರ್ವಜನಿಕ ಸಹಕಾರ ಮುಖ್ಯ ಎಂದರು.

ಪಿಡಿಓ ಅಧಿಕಾರಿ ಕುಶಾಲಪ್ಪ, ಕಾರ್ಯದರ್ಶಿ ತಮ್ಮಯ್ಯಾಚಾರ್, ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸೌಭಾಗ್ಯಲಕ್ಷ್ಮಿ, ಸರ್ದಾರ್ ಅಹಮದ್, ಆದಿತ್ಯ, ರಜನಿ, ಪಾಂಡು, ಹರೀಶ್, ಉಷಾ, ಹೇಮಾವತಿ ಉಪಸ್ಥಿತರಿದ್ದರು.

ದಿವಾಕರ್, ನಾಗರಾಜ್ ರಂಗಸ್ವಾಮಿ, ಹರೀಶ್, ಮಹಮ್ಮದ್ ಪಾಶ, ಬಿ.ಕೆ. ಚಂದ್ರು ಹಾಗೂ ಅಮೀರ್ ಮತ್ತಿತರರು ಸಭೆಯಲ್ಲಿ ಸಮಸ್ಯೆಗಳನ್ನು ಪ್ರತಿಪಾದಿಸಿದರು.