ಸೋಮವಾರಪೇಟೆ, ಜು. 20: ಸಮೀಪದ ಬೇಳೂರು ಬಾಣೆಯಲ್ಲಿ ಮೋಜು ಮಸ್ತಿ ನಡೆಸಿ, ಮದ್ಯ ಸೇವಿಸಿದ ಖಾಲಿ ಬಾಟಲ್ಗಳು, ಪ್ಲಾಸ್ಟಿಕ್ ಗ್ಲಾಸ್ಗಳನ್ನು ಎಲ್ಲೆಂದರಲ್ಲಿ ಬಿಸಾಕಿದ್ದುದನ್ನು ಗಮಿನಿಸಿದ ರಾಜ್ಯದ ವಿವಿಧ ಮಠಾಧೀಶರುಗಳು ಸ್ವತಃ ಅವುಗಳನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾಪಾಡುವಂತೆ ಜನರಲ್ಲಿ ಜಾಗೃತಿ ಮೂಡಿಸಿದರು.
ಚಿತ್ರದುರ್ಗದ ಶ್ರೀ ಮುರುಘಾಮಠ, ಬಸವಕೇಂದ್ರದ ಆಶ್ರಯದಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ಸಮ್ಮುಖದಲ್ಲಿ ನಾಲ್ಕು ದಿನಗಳ ಕಾಲ ಬೇಳೂರು ಮಠದ ಆವರಣದಲ್ಲಿ ನಡೆಯಲಿರುವ ರಾಜ್ಯದ ವಿವಿಧ ಮಠಾಧೀಶರುಗಳ ಚಿಂತನಾ ಕಾರ್ಯಾಗಾರ ಕಾರ್ಯಕ್ರಮಕ್ಕಾಗಿ ಆಗಮಿಸಿರುವ ಮಠಾಧೀಶರುಗಳು ನಿಸರ್ಗ ನಡಿಗೆಯಲ್ಲಿ ಮಠದ ಪಕ್ಕದಲ್ಲಿರುವ ನಿಸರ್ಗ ತಾಣ ಬೇಳೂರು ಬಾಣೆಗೆ ತೆರಳಿದರು.
ಈ ಪ್ರದೇಶಕ್ಕೆ ಕಾಲಿಟ್ಟಂತೆ ಮದ್ಯದ ಖಾಲಿ ಬಾಟಲ್ಗಳು, ಪ್ಲಾಸ್ಟಿಕ್ ಲೋಟಗಳು, ಇತರ ತ್ಯಾಜ್ಯಗಳು ಕಣ್ಣಿಗೆ ರಾಚಿದವು. ಇದರಿಂದಾಗಿ ಸ್ವಾಮೀಜಿಗಳು ಇಡೀ ಪ್ರದೇಶವನ್ನು ಸ್ವಚ್ಛಗೊಳಿಸುವ ಕಾರ್ಯ ಕೈಗೊಂಡರು.
ಪ್ರವಾಸಿಗರು ಸೇರಿದಂತೆ ಇತರರು ಈ ಪ್ರದೇಶದಲ್ಲಿ ಸಂಜೆಯ ವೇಳೆ ವಾಯುವಿಹಾರ, ಪಾರ್ಟಿಯ ನೆಪದಲ್ಲಿ ತಿಂಡಿ ತಿನಿಸುಗಳು, ನೀರಿನ ಬಾಟಲ್, ಮದ್ಯದ ಬಾಟಲ್ಗಳನ್ನು ಅಲ್ಲಲ್ಲೇ ಹಾಕುತ್ತಿರುವದರಿಂದ ಪ್ರಕೃತಿ ತಾಣ ಕಸದ ಮೈದಾನವಾಗಿ ಮಾರ್ಪಡುತ್ತಿದೆ.
ಮುರುಘಾ ಶರಣರು ಮಾತನಾಡಿ ಪ್ರಕೃತಿದತ್ತವಾದ ಇಂತಹ ಪ್ರದೇಶವನ್ನು ಕೆಲವು ಮಂದಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ವ್ಯಸನಿಗಳು ತಾವು ಮದ್ಯಪಾನ ಮಾಡಿದ ಬಾಟಲ್ಗಳನ್ನು ಬಾಣೆಯಲ್ಲೇ ಎಸೆದು ಪರಿಸರವನ್ನು ಹಾಳುಗೆಡವುತ್ತಿದ್ದಾರೆ. ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಬೇಕು. ಪರಿಸರವನ್ನು ಸ್ವಚ್ಛತೆಯೊಂದಿಗೆ ಉಳಿಸಿಕೊಳ್ಳಬೇಕು ಎಂದರು.