ಮಡಿಕೇರಿ, ಆ. 21: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಹಾಗೂ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಮುಷ್ಕರ ನಡೆಸಿತು.ಅರಣ್ಯ ಪ್ರದೇಶ ಅಭಯಾರಣ್ಯ ದಲ್ಲಿ ವಾಸಿಸುವ ಬುಡಕಟ್ಟು ಸಮುದಾಯದ ಪ್ರತೀ ಕುಟುಂಬಗಳಿಗೂ ಅರಣ್ಯ ಹಕ್ಕು ಕಾಯ್ದೆ 2006 ರಂತೆ 4 ಹೆಕ್ಟೇರ್ ಭೂಮಿಗೆ ಹಕ್ಕು ಪತ್ರ ನೀಡಬೇಕು. ಅರಣ್ಯದಲ್ಲಿ ವಸತಿಯ ಹಕ್ಕನ್ನು ಮಾನ್ಯ ಮಾಡಬೇಕು, ಎಲ್ಲಾ ಹಾಡಿಗಳಿಗೆ ಪಾರಂಪರಿಕ ಹಕ್ಕು ಮತ್ತು ಜೀವನಾಧಾರದ ಹಕ್ಕನ್ನು ಒಳಗೊಂಡು ಅರಣ್ಯ ಹಕ್ಕು ಕಾಯ್ದೆ 2006 ರಂತೆ ಸಮುದಾಯ ಹಕ್ಕು ಪತ್ರ ನೀಡಬೇಕು.

ಅರಣ್ಯ ಪ್ರದೇಶದ ಹೊರಗಿರುವ ಬುಡಕಟ್ಟು ಕುಟುಂಬಗಳಿಗೆ ಪ್ರತೀ ಕುಟುಂಬಕ್ಕೆ 5 ಎಕರೆ ಪೈಸಾರಿ ಭೂಮಿ ನೀಡಬೇಕು, ಭೂಗಳ್ಳರು ಮತ್ತು ಶ್ರೀಮಂತರು ಒತ್ತುವರಿ ಮಾಡಿರುವ ಜಮೀನನ್ನು ಸರಕಾರ ವಶಪಡಿಸಿ ಕೊಂಡು ಬುಡಕಟ್ಟು ಸಮುದಾಯ ಹಾಗೂ ದಲಿತ ಸಮುದಾಯದವರಿಗೆ ಮತ್ತು ಬಡವರಿಗೆ ಹಂಚಬೇಕು.

ಭೂಮಿತಿ ಕಾಯ್ದೆಯನ್ನು ಪರಿಷ್ಕರಿಸಬೇಕು, ದೇವರ ಕಾಡುಗಳಲ್ಲಿ ವಾಸ ಮಾಡಿಕೊಂಡಿರುವ ಕುಟುಂಬಗಳಿಗೆ ಅರಣ್ಯ ಹಕ್ಕು ಮತ್ತು ವಾಸದ ಹಕ್ಕನ್ನು

(ಮೊದಲ ಪುಟದಿಂದ) ಮಾನ್ಯ ಮಾಡಿ ಪ್ರತಿಯೊಂದು ಕುಟುಂಬಕ್ಕೂ ತಲಾ 4 ಹೆಕ್ಟೇರ್ ಭೂಮಿಗೆ ಹಕ್ಕು ಪತ್ರ ನೀಡಬೇಕು, ಸಮುದಾಯ ಹಕ್ಕು ಪತ್ರ ನೀಡಬೇಕು, ಕೊಡಗು ಜಿಲ್ಲೆಯ ಎಸ್ಟೇಟ್‍ಗಳ ಲೈನ್ ಮನೆಗಳಲ್ಲಿ ವಾಸ ಮಾಡಿಕೊಂಡಿರುವ ಬುಡಕಟ್ಟು ಕುಟುಂಬಗಳನ್ನು ಹೊರಗೆ ತಂದು ಅವರಿಗೆ ಪ್ರತೀ ಕುಟುಂಬಕ್ಕೆ ತಲಾ 5 ಎಕರೆ ಕೃಷಿ ಭೂಮಿ ನೀಡಿ ಪುನರ್ವಸತಿ ನೀಡಬೇಕು. ಈ ಬೇಡಿಕೆಗಳನ್ನು ಕಾಲಮಿತಿಯೊಳಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮುದಾಯ ಸದಸ್ಯರನ್ನೊಳಗೊಂಡು ಭೂಮಿಯ ಹಕ್ಕು ಸಮನ್ವಯ ಸಮಿತಿಯನ್ನು ರಚಿಸಬೇಕು. ಈ ಸಮಿತಿಯು ಪ್ರತೀ ತಿಂಗಳು ಸಭೆ ಸೇರಿ ಪ್ರಗತಿ ಪರಿಶೀಲಿಸಬೇಕು ಎಂದು ಆಗ್ರಹಿಸಿ ಜಾಥಾ ನಡೆಯಿತು.