ಮಡಿಕೇರಿ, ಸೆ. 27: ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ವಿವಿಧ ಗ್ರಾ.ಪಂ. ಹಾಗೂ ಕಚೇರಿಗಳಿಗೆ ತೆರಳಿ ಕುಂದುಕೊರತೆ ಪರಿಶೀಲಿಸಿದರು. ಹಾಲುಗುಂದ ಗ್ರಾಮ ಪಂಚಾಯಿತಿಗೆ ತೆರಳಿ ಸ್ಥಳೀಯರು ಹಾಗೂ ಸದಸ್ಯರ ಅಹವಾಲನ್ನು ಸ್ವೀಕರಿಸಿದರು. ಆನೆ ಹಾವಳಿಯ ಪರಿಹಾರ ಮಂಜೂರಾತಿ, ರಸ್ತೆಯ ದುರಸ್ತಿ, ಕುಡಿಯುವ ನೀರಿನ ಸಮಸ್ಯೆ ಹಾಗೂ ವಿದ್ಯುತ್ ಸಂಪರ್ಕದ ಸಮಸ್ಯೆಗಳನ್ನು ಆಲಿಸಿದರು. ಎಲ್ಲಾ ಮನೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಿ ಬಯಲು ಮುಕ್ತ ಮಾಡಲು ಪಿ.ಡಿ.ಓ. ಅವರಿಗೆ ಆದೇಶ ನೀಡಿದರು. ಕೇತಿ ಮೊಟ್ಟೆಯಲ್ಲಿರುವ ಕುಡಿಯುವ ನೀರಿನ ಕಾಮಗಾರಿ ಹಾಗೂ ಎಲಿಯಂಗಾಡು ಕೊಳವೆ ಬಾವಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಶಾಸಕರು ಜಿಲ್ಲಾ ಪಂಚಾಯಿತಿ ಅಭಿಯಂತರರಿಗೆ ಸೂಚನೆ ನೀಡಿದರು. ಬೀದಿ ದೀಪಗಳನ್ನು ಅಳವಡಿಸುವ ಬಗ್ಗೆ ಸಾರ್ವಜನಿಕರು ಮನವಿ ಮಾಡಿದ್ದು, ಗ್ರಾಮ ಪಂಚಾಯಿತಿಯಿಂದ ಬೀದಿ ದೀಪಗಳ ನಿರ್ವಹಣೆ ಮಾಡಿ ವರದಿ ನೀಡಲು ಪಿ.ಡಿÉೂೀ. ಅವರಿಗೆ ಸೂಚನೆ ನೀಡಲಾಯಿತು.

ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿ, ತನ್ನ ಕಾರ್ಯ ವ್ಯಾಪ್ತಿಯೊಳಗೆ ಪಂಚಾಯತ್ ರಾಜ್ ವ್ಯವಸ್ಥೆಯಡಿ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಪಡುತ್ತೇನೆ. ಯಾವದೇ ಸಮಸ್ಯೆ ಗಳಿದ್ದರೂ ಜನಪ್ರತಿನಿಧಿಗಳೊಂದಿಗೆ ಸಮಸ್ಯೆಗಳನ್ನು ಹಂಚಿಕೊಂಡು ಸೌಹಾರ್ದ ರೀತಿಯಲ್ಲಿ ಬಗೆ ಹರಿಸಿಕೊಳ್ಳಲು ಮನವಿ ಮಾಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಾದಲಿ, ಸದಸ್ಯ ನಾಚಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯರು ಹಾಗೂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಶಿ ಸುಬ್ರಮಣಿ, ತಾಲೂಕು ಪಂಚಾಯತಿ ಅಧ್ಯಕ್ಷೆ ಸ್ಮಿತಾ ಪ್ರಕಾಶ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸದಸ್ಯರಾದ ಆಲತಂಡ ಸೀತಮ್ಮ, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಇಲಾಖಾಧಿಕಾರಿಗಳು ಹಾಜರಿದ್ದರು.