ಶನಿವಾರಸಂತೆ, ಡಿ. 10: ನಿಡ್ತ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯನಪುರ ಗ್ರಾಮದಲ್ಲಿ ಸಾರ್ವಜನಿಕ ಸಮುದಾಯ ಭವನ ರಸ್ತೆ ಡಾಂಬರೀಕರಣ ಚರಂಡಿ ನಿರ್ಮಾಣ ಕಾಂಕ್ರೀಟ್ ರಸ್ತೆ ಹಾಗೂ ಸಾರ್ವಜನಿಕ ಕಾಮಗಾರಿಗಳಿಗೆ ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಲೋಕೇಶ್ ಹಾಗೂ ಜನಪ್ರತಿನಿಧಿಗಳು ಭೂಮಿ ಪೂಜೆ ನೆರವೇರಿಸಿದರು.
ವಿವಿಧ ಕಾಮಗಾರಿಗಳಿಗೆ ಜಿ.ಪಂ. ಅನುದಾನದಿಂದ ರೂ. 75 ಲಕ್ಷ ಬಿಡುಗಡೆಯಾಗಿದ್ದು, ಒಡೆಯನಪುರ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತರಾಮ್ ಅವರಿಂದ ಭೂಮಿಪೂಜೆ ನೆರವೇರಿಸುವ ದಿನ ಮೊದಲೇ ನಿಗದಿಯಾಗಿತ್ತು. ಆದರೆ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ನಿಧನದ ಹಿನ್ನೆಲೆ ದೇಶದ್ಯಾಂತ ಶೋಕಾಚರಣೆಯ ಪ್ರಯುಕ್ತ ಸರಕಾರಿ ಕಾರ್ಯಕ್ರಮಗಳು ರದ್ದಾಗಿರುವ ಕಾರಣ ಉಸ್ತುವಾರಿ ಸಚಿವ ಸೀತಾರಾಮ್ ಸ್ಥಳಕ್ಕೆ ಆಗಮಿಸಿದ್ದರೂ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಲು ನಿರಾಕರಿಸಿದರು. ಆದಕಾರಣ ಜಿಲ್ಲಾ ಮತ್ತು ಸ್ಥಳೀಯ ಜನಪ್ರತಿನಿಧಿಗಳು ಕಾಮಗಾರಿಗಳಿಗೆ ಸಾಂಕೇತಿಕವಾಗಿ ಭೂಮಿಪೂಜೆ ನೆರವೇರಿಸಿದರು. ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವೀಣಾ ಅಚ್ಚಯ್ಯ, ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ತಾ.ಪಂ. ಅಧ್ಯಕ್ಷೆ ಪುಷ್ಪ ರಾಜೇಶ್, ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯೆ ಲೀಲಾವತಿ, ಜಿ.ಪಂ. ಮಾಜಿ ಉಪಾಧ್ಯಕ್ಷೆ ರಾಜಮ್ಮ ರುದ್ರಯ್ಯ ಪ್ರಮುಖರಾದ ಮುಸ್ತಫಾ, ಎಂ.ಡಿ. ಸುಬ್ಬಯ್ಯ ಚಂಗಪ್ಪ, ನಳನಿ ಇತರರಿದ್ದರು.