ವೀರಾಜಪೇಟೆ: ವೀರಾಜಪೇಟೆ ಸಮೀಪದ ಕದನೂರು ಸಸ್ಯ ಕ್ಷೇತ್ರದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಸಾಮಾಜಿಕ ಅರಣ್ಯ ವಲಯದ ವತಿಯಿಂದ ಬೆಳೆಸಿದ ಸಿಲ್ವರ್ ಗಿಡಗಳನ್ನು ರೈತರಿಗೆ ವಿತರಿಸಲಾಯಿತು.
ಬಳಿಕ ಮಾತನಾಡಿದ ಜಿ.ಪಂ. ಸದಸ್ಯ ಮಹೇಶ್, ಮುಂದಿನ ಸಾಲಿಗೆ ಇನ್ನಷ್ಟು ಹೆಚ್ಚಿನ ಗಿಡಗಳನ್ನು ಬೆಳೆಸಿ ರೈತರಿಗೆ ವಿತರಿಸಲಾಗುವದು. ಜಿಲ್ಲಾ ಪಂಚಾಯಿತಿಯಿಂದ ವಿತರಿಸಿದ ಗಿಡಗಳನ್ನು ತೋಟದ ಮಾಲೀಕರು ಉತ್ತಮ ರೀತಿಯಲ್ಲಿ ಬೆಳೆಸುವಂತೆ ಕರೆ ನೀಡಿದರು.
ಈ ಸಂದರ್ಭ ಉಪ ವಲಯ ಅರಣ್ಯಾಧಿಕಾರಿ ಚಂದ್ರಹಾಸ ನಾಯಕ್, ವಲಯ ಅರಣ್ಯಾಧಿಕಾರಿ ಜೆ.ಪಿ. ಪ್ರಸನ್ನ ಮುಂತಾದವರು ಭಾಗವಹಿಸಿದ್ದರು.ಚೆಟ್ಟಳ್ಳಿ: ಜಿಲ್ಲಾ ಪಂಚಾಯಿತಿಯ ಅನುದಾನದಲ್ಲಿ ಸೋಮವಾರಪೇಟೆ ತಾಲೂಕು ಅರಣ್ಯ ಇಲಾಖೆಯ ವತಿಯಿಂದ ವಾಲ್ನೂರು ತ್ಯಾಗತ್ತೂರು ಕ್ಷೇತ್ರದ ಜಿ.ಪಂ. ಸದಸ್ಯೆ ಸುನಿತಾ ಅವರು ಫಲಾನುಭವಿಗಳಿಗೆ ಸಿಲ್ವರ್ ಸಸಿ ವಿತರಿಸಿದರು. ಜಿ.ಪಂ. ಸದಸ್ಯರಿಗೆ 10000 ಸಿಲ್ವರ್ ಸಸಿಯನ್ನು ಫಲಾನುಭವಿಗಳಿಗೆ ವಿತರಿಸುವ ಅನುದಾನವಿದ್ದು, ಅರ್ಹ ಫಲಾನುಭವಿಗಳು ಸಂಬಂಧಪಟ್ಟ ಜಿ.ಪಂ. ಸದಸ್ಯರ ಶಿಫಾರಸ್ಸು ಪತ್ರ ಹಾಗೂ ಆರ್ಟಿಸಿಯನ್ನು ನೀಡಿ ನಿಗದಿಪಡಿಸಿದ ಸ್ಥಳದಿಂದ ಸಿಲ್ವರ್ ಸಸಿಯನ್ನು ಪಡೆಯಬಹುದಾಗಿದೆ.
ಈ ಸಂದರ್ಭ ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವತ್ಸಲ, ಮೇಲ್ವಿಚಾರಣಾಧಿಕಾರಿ ಪ್ರಸನ್ನ ಹಾಗೂ ಇನ್ನಿತರರು ಹಾಜರಿದ್ದರು.
ಶನಿವಾರಸಂತೆ: ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮೂಡಿಸಲು ವನ ಮಹೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಪರಿಣಾಮಕಾರಿ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಶಿಧರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಸಮೀಪದ ಕೊಡ್ಲಿಪೇಟೆ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಸಸಿ ನೆಡುವ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಸಮೂಹ ಸಂಪನ್ಮೂಲ ವ್ಯಕ್ತಿ ಎಸ್.ಎಂ. ಸುರೇಶ್ ಮಾತನಾಡಿ, ವಿಶ್ವ ಪರಿಸರ ದಿನವಾಗಿ ಜೂನ್ 5 ಆಚರಿಸಲು ವಿಶ್ವ ಸಂಸ್ಥೆ ನಿಗದಿಪಡಿಸಿದೆ ಎಂದು ಪರಿಸರ ದಿನದ ಮಹತ್ವ ವಿವರಿಸಿದರು.
ಶಿಕ್ಷಕ ರವಿ ಶಂಕರ ಮೂರ್ತಿ ಅರಣ್ಯಗಳ ಮಹತ್ವ ಹಾಗೂ ಪರಿಸರದಲ್ಲಿನ ಬದಲಾವಣೆಯ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಮುಖ್ಯ ಶಿಕ್ಷಕಿ ಜಾನಕಮ್ಮ, ಶಿಕ್ಷಕರಾದ ಸಂಧ್ಯಾ, ಸುಧಾಮತಿ, ವನಿತಾ, ಪವಿತ್ರಾ ಇದ್ದರು.