ಕುಶಾಲನಗರ, ಆ. 4: ಕುಶಾಲನಗರದ ಮಾರುಕಟ್ಟೆಗೆ ತೆರಳುವ ರಸ್ತೆಯಲ್ಲಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ವಿದ್ಯುತ್ ಕಂಬವೊಂದು ಮುರಿದು ಬಿದ್ದು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುವದರೊಂದಿಗೆ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡ ಘಟನೆ ನಡೆದಿದೆ. ಆಂಜನೇಯ ದೇವಾಲಯ ಸಮೀಪ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಸೋಮವಾರ ಮಧ್ಯರಾತ್ರಿ ಅಪರಿಚಿತ ವಾಹನವೊಂದು ಡಿಕ್ಕಿಯಾಗಿ ಕಂಬದ ಬುಡಭಾಗ ಮುರಿದು ಎರಡು ಅಡಿ ದೂರಕ್ಕೆ ಸ್ಥಳಾಂತರಗೊಂಡಿದೆ. ಕಂಬದ ಮೇಲ್ಭಾಗದಲ್ಲಿನ ಕೇಬಲ್ ವೈಯರ್‍ಗಳಿದ್ದ ಕಾರಣ ನೆಲಕ್ಕುರುಳದೆ ಜೋತು ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಸ್ವಲ್ಪ ಕಾಲ ಅನಾನೂಕೂಲ ಉಂಟಾಗಿತ್ತು.
ಪಟ್ಟಣ ಸೇರಿದಂತೆ ಕೂಡ್ಲೂರು ಕೈಗಾರಿಕಾ ಪ್ರದೇಶದ ಕೆಲವು ಘಟಕಗಳಿಗೆ, ಹೆಬ್ಬಾಲೆಯ ನೀರು ಸರಬರಾಜು ಕೇಂದ್ರಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ
11 ಕೆವಿ ವಿದ್ಯುತ್ ಮಾರ್ಗ ಇದಾಗಿದ್ದು, ಸೆಸ್ಕ್ ಸಿಬ್ಬಂದಿಗಳು ಈ ವಿದ್ಯುತ್ ಮಾರ್ಗವನ್ನು ಬೇರೆ ಕಂಬಕ್ಕೆ ಬದಲಾಯಿಸುವ ಕಾರ್ಯ ಕೈಗೊಂಡರು. ಇದರಿಂದಾಗಿ ಮಂಗಳವಾರ ಮಧ್ಯಾಹ್ನದವರೆಗೆ ಪಟ್ಟಣ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು. ಕೊಣನೂರು-ಮಾಕುಟ್ಟ ರಾಜ್ಯ ಹೆದ್ದಾರಿ ರಸ್ತೆ ಅಗಲೀಕರಣ ಸಂದರ್ಭ ಮಾರುಕಟ್ಟೆ ವ್ಯಾಪ್ತಿಯಲ್ಲಿ ತಡೆಯುಂಟಾದ ಕಾರಣ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಆಗಾಗ್ಯೆ ಅನಾಹುತಗಳು ನಡೆಯುತ್ತಿದೆ. ಈ ಬಗ್ಗೆ ರಸ್ತೆ ಅಗಲೀಕರಣ ಕಾಮಗಾರಿ ಸಮರ್ಪಕಗೊಳಿಸಲು ಕರ್ನಾಟಕ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮ ಅಧಿಕಾರಿಗಳು ಕ್ರಮಕೈಗೊಳ್ಳುವಂತೆ ನಾಗರಿಕರು ಆಗ್ರಹಿಸಿದ್ದಾರೆ.