ಮಡಿಕೇರಿ, ಸೆ. 28: ಕೊಡಗಿನ ಮೊಟ್ಟ ಮೊದಲ ಸಹಕಾರಿ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿಯಲ್ಲಿ ಸದಸ್ಯರಿಗಾಗಿ ಅನೇಕ ಆರ್ಥಿಕ ಸೌಲಭ್ಯಗಳಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ಸಂಘವನ್ನು ಸದೃಢಗೊಳಿಸುವಂತೆ ಸಂಘದ ಅಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್ ಕರೆ ನೀಡಿದರು.

ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಹಕಾರಿಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘ 2015-16 ನೇ ಸಾಲಿನಲ್ಲಿ ರೂ. 20.50 ಕೋಟಿ ವ್ಯವಹಾರ ನಡೆಸಿ ರೂ. 20.51 ಲಕ್ಷ ಲಾಭಗಳಿಸಿದೆ ಎಂದರು. ಸದಸ್ಯರಿಗೆ ಅನುಗುಣವಾಗಿ ರೂ. 2 ಲಕ್ಷದವರೆಗೆ ಶೇ. 13.5 ರ ಬಡ್ಡಿ ದರದಲ್ಲಿ ಜಾಮೀನು ಸಾಲ ನೀಡಲಾಗುವದು. ತುರ್ತು ಅವಶ್ಯಕತೆಗಾಗಿ ರೂ. 50 ಸಾವಿರದವರೆಗೆ ತುರ್ತು ಸಾಲ, ರೂ. 10 ಲಕ್ಷ ಮಿತಿಯೊಳಗೆ ಗೃಹ ನಿರ್ಮಾಣ ಹಾಗೂ ಗೃಹ ಖರೀದಿಗೆ ಗೃಹ ಸಾಲ, ರೂ. 5 ಲಕ್ಷ ಮಿತಿಯೊಳಗೆ ಹೊಸ ವಾಹನ ಖರೀದಿಗೆ ವಾಹನ ಸಾಲ, ನಿವೃತ್ತ ಸದಸ್ಯರಿಗೆ ರೂ. 1 ಲಕ್ಷದವರೆಗೆ ಜಾಮೀನು ಸಾಲ ನೀಡಲಾಗುವದು ಎಂದು ಮಾಹಿತಿ ನೀಡಿದರು.

ಭವಿಷ್ಯ ನಿಧಿಯನ್ನು ಸ್ಥಾಪಿಸಿ, ಮಾಸಿಕ ವಂತಿಕೆ ವಸೂಲಿ ಮಾಡಿ ಆಕರ್ಷಕ ಬಡ್ಡಿಯನ್ನು ನೀಡುವದರೊಂದಿಗೆ ಸದಸ್ಯರು ನಿವೃತ್ತಿಯಾದಾಗ ಮರುಪಾವತಿ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಸದಸ್ಯರು ಮೃತಪಟ್ಟರೆ, ಅವರ ವಾರಸುದಾರರಿಗೆ ರೂ. 15 ಸಾವಿರ ಮರಣ ಪರಿಹಾರ ಧನ ನೀಡಲಾಗುತ್ತಿದೆ. ಸದಸ್ಯರಿಂದ ನಿರಕು ಠೇವಣಿಯನ್ನು ಸಂಗ್ರಹಿಸಿ ಆಕರ್ಷಕ ಬಡ್ಡಿಯನ್ನು ನೀಡಲಾಗುತ್ತಿದೆ. ಪ್ರಸ್ತುತ ಸಾಮಾನ್ಯ ಸದಸ್ಯರಿಗೆ ಶೇ. 9, ಹಿರಿಯ ಸದಸ್ಯರಿಗೆ ಶೇ. 9.75 ಬಡ್ಡಿಯನ್ನು ನೀಡಲಾಗುತ್ತಿದೆ.

ಸಹಕಾರಿಯ ಕಛೇರಿಯಲ್ಲಿ ಭದ್ರತಾ ಕೊಠಡಿಯನ್ನು ಅಳವಡಿಸ ಲಾಗಿದ್ದು, ತುರ್ತು ಅವಶ್ಯಕತೆಗಾಗಿ ಶೇ. 12 ರ ಬಡ್ಡಿ ದರದಲ್ಲಿ ಚಿನ್ನಾಭರಣ ಅಡಮಾನ ಸಾಲವನ್ನು ಸದಸ್ಯರಿಗೂ ಹಾಗೂ ನಾಮಮಾತ್ರ ಸದಸ್ಯರಿಗೂ ಒದಗಿಸಲಾಗುತ್ತಿದೆ ಎಂದರು. ಸದಸ್ಯರು ಸಹಕಾರಿಯಲ್ಲಿ ಉಳಿತಾಯ ಖಾತೆ ಹಾಗೂ ಆರ್.ಡಿ. ಖಾತೆ ತೆರೆದು ವ್ಯವಹಾರ ಮಾಡುವ ಮೂಲಕ ಸಹಕಾರಿಯ ಆರ್ಥಿಕ ಸ್ಥಿತಿಯನ್ನು ಬಲ ಪಡಿಸಲು ಸಹಕರಿಸುವಂತೆ ಮಂಜುನಾಥ್ ಕುಮಾರ್ ಇದೇ ಸಂದರ್ಭ ತಿಳಿಸಿದರು.

ವರ್ಷದಿಂದ ವರ್ಷಕ್ಕೆ ಪ್ರಗತಿ ಹೊಂದುತ್ತಿರುವ ಸಹಕಾರಿಯಲ್ಲಿ ರೂ. 2 ಕೋಟಿಗೂ ಹೆಚ್ಚು ಷೇರು ಬಂಡವಾಳವಿದ್ದು, ಸುಮಾರು ರೂ. 8.72 ಕೋಟಿಯಷ್ಟು ಸಾಲ ನೀಡಲಾಗಿದೆ ಎಂದರು.

ಸಂಘದ ಮಾಜಿ ಅಧ್ಯಕ್ಷರಾದ ಡಿ.ಬಿ. ಸೋಮಪ್ಪ, ಉಪಾಧ್ಯಕ್ಷೆ ಡಿ.ಎಂ. ರೇವತಿ, ನಿರ್ದೇಶಕರುಗಳಾದ ಹೆಚ್.ಆರ್. ಮುತ್ತಪ್ಪ, ಇಂದಿರಾವತಿ, ಎ.ಎಸ್. ಶ್ರೀಧರ್, ಎನ್.ಸಿ. ದೇವಾನಂದ, ಎಂ.ಆರ್. ವನಜ, ಎ.ಡಿ. ಸೋಮಯ್ಯ, ಕೆ.ಬಿ. ರವಿ, ಹೆಚ್.ಹೆಚ್. ಪ್ರಕಾಶ್, ಪಿ.ಎ. ಪ್ರವೀಣ್, ಎ.ವಿ. ಮಂಜುನಾಥ್, ಸುನೀತ ಕುಮಾರಿ, ಹೆಚ್.ಆರ್. ಮುತ್ತಪ್ಪ, ಸಿ.ಎಲ್. ಪುಟ್ಟರಾಜು, ಕಾರ್ಯನಿರ್ವಾಹಕ ಅಧಿಕಾರಿ ಪಿ.ಎಸ್. ಮುತ್ತಮ್ಮ ಮತ್ತಿತರ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು.

ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ.ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ ಹಾಗೂ ಹಿರಿಯ ಸದಸ್ಯರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.