ಶ್ರೀಮಂಗಲ, ಜ. 31: ವಿದ್ಯಾರ್ಥಿಗಳು ಗುರಿಯನ್ನು ಇಟ್ಟುಕೊಂಡು ಅದನ್ನು ಮುಟ್ಟಲು ನಿರಂತರ ಪ್ರಯತ್ನ ಪಟ್ಟಾಗ ಯಶಸ್ಸು ಸಾಧ್ಯವಿದೆ. ಮಕ್ಕಳನ್ನು ಉತ್ತಮ ವಿದ್ಯಾರ್ಥಿಯಾಗಿ, ಮುಂದೆ ಸತ್ಪ್ರಜೆಯಾಗಿ ರೂಪಿಸಲು ಶಿಕ್ಷಣ ಸಂಸ್ಥೆಯೊಂದಿಗೆ ಪೋಷಕರ ಜವಾಬ್ದಾರಿಯೂ ಸಮಪ್ರಮಾಣ ದಾಗಿದೆ ಎಂದು ಶ್ರೀಮಂಗಲ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಕೆ.ಎಂ. ಚಂಗಪ್ಪ ಅಭಿಪ್ರಾಯ ಪಟ್ಟರು.

ಶ್ರೀಮಂಗಲದ ಜೆ.ಸಿ ಎಜುಕೇಶನಲ್ ಟ್ರಸ್ಟ್ ವತಿಯಿಂದ ಜೆ.ಸಿ. ಪ್ರಾಥಮಿಕ ಹಾಗೂ ಪ್ರೌಡಶಾಲೆಯ 27ನೇ ವಾರ್ಷಿ ಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಶ್ರೀಮಂಗಲ ಜೆ.ಸಿ. ವಿದ್ಯಾಸಂಸ್ಥೆ ಈ ಹಿಂದೆ ಎಸ್.ಎಸ್.ಎಲ್.ಸಿ.ಯಲ್ಲಿ 2 ಬಾರಿ ಕೊಡಗು ಜಿಲ್ಲೆಗೆ ರ್ಯಾಂಕ್ ತಂದು ಕೊಟ್ಟಿರುವದನ್ನು ಪ್ರಸ್ತಾಪಿಸಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಗುಣಮಟ್ಟದ ಶಿಕ್ಷಣ ಅವಶ್ಯವಿದೆ ಎಂದು ಹೇಳಿದರು.

ಜೆ.ಸಿ. ಶಿಕ್ಷಣ ಸಂಸ್ಥೆಯ ಕರೆಸ್ಪಾಂಡೆಂಟ್ ಮಚ್ಚಮಾಡ ಸುರೇಶ್ ಮಾತನಾಡಿ, ಶ್ರೀಮಂಗಲದಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ 27 ವರ್ಷದ ಹಿಂದೆ ಜೆ.ಸಿ. ವಿದ್ಯಾಸಂಸ್ಥೆಯನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶ, ವಿದೇಶಗಳಲ್ಲಿ ಉತ್ತಮ ಸ್ಥಾನ ಮಾನದಲ್ಲಿರುವದು ನಮಗೆಲ್ಲಾ ಹೆಮ್ಮೆ ತಂದಿದೆ. ಆದ್ದರಿಂದ ಸ್ಥಳೀಯ ವಿದ್ಯಾರ್ಥಿಗಳ ಪ್ರಯೋಜನಕ್ಕಾಗಿ ಸ್ಥಾಪನೆಯಾಗಿರುವ ಈ ವಿದ್ಯಾಸಂಸ್ಥೆಯ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಮನವಿ ಮಾಡಿದರು. ಸಂಸ್ಥೆಯ ಅಧ್ಯಕ್ಷ ಕೋಟ್ರಂಗಡ ಸುಬ್ರಮಣಿ ಮಾತನಾಡಿ, 27 ವರ್ಷದ ಹಿಂದೆ ಆಂಗ್ಲ ಮಾಧ್ಯಮದಲ್ಲಿ ಶಾಲೆಯನ್ನು ಸ್ಥಾಪಿಸಲಾಯಿತು.

ಇಂದು ಸ್ಪರ್ಧಾತ್ಮಕ ಯುಗವಾಗಿದ್ದು, ಬರೆ ಪಾಠವಷ್ಟೇ ಅಲ್ಲ ಪಠ್ಯೇತರ ಚಟುವಟಿಕೆಗಳು ಹಾಗೂ ಕ್ರೀಡೆಯಲ್ಲಿ ನಮ್ಮ ಶಾಲೆ ಅಮೋಘ ಸಾಧನೆ ತೃಪ್ತಿ ತಂದಿದೆ ಎಂದರು.

ಕಳೆದ ಸಾಲಿನ ಎಸ್.ಎಸ್. ಎಲ್.ಸಿ.ಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಗಮನ ಸೆಳೆಯಿತು. ಪ್ರಾಥಮಿಕ ಶಾಲಾ ವಾರ್ಷಿಕ ವರದಿಯನ್ನು ಮುಖ್ಯೋಪಾಧ್ಯಾಯಿನಿ ಚೇಮಿರ ಜಮುನಾ, ಪ್ರೌಢಶಾಲೆಯ ವಾರ್ಷಿಕ ವರದಿಯನ್ನು ಶಾಲಾ ಮುಖ್ಯೋಪಾಧ್ಯಾಯ ನೂರೇರ ಸತೀಶ್ ವಾಚಿಸಿದರು. ಸಂಸ್ಥೆಯ ಖಜಾಂಚಿ ಕೋಟ್ರಂಗಡ ತಿಮ್ಮಯ್ಯ ಸ್ವಾಗತಿಸಿ, ವಂದಿಸಿದರು.