ಸೋಮವಾರಪೇಟೆ, ಆ. 5: ವಿದ್ಯಾರ್ಥಿಗಳಲ್ಲಿ ಕಲಿಕಾ ಹಂತ ದಲ್ಲಿಯೇ ವೈಜ್ಞಾನಿಕ ಮನೋಭಾವನೆ ಮೂಡಿಸಬೇಕು. ವಿಜ್ಞಾನಕ್ಕೆ ಸಂಬಂಧಿಸಿದ ಪುಸ್ತಕಗಳು ಹಾಗೂ ವಿಜ್ಞಾನಿಗಳ ಜೀವನ ಚರಿತ್ರೆಯ ವಿಚಾರ ಗಳನ್ನು ಶಿಕ್ಷಕರು ವಿದ್ಯಾರ್ಥಿಗಳಿಗೆ ತಿಳಿಸಬೇಕೆಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪೂರ್ಣಿಮ ಗೋಪಾಲ್ ಹೇಳಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಇಲ್ಲಿನ ಚನ್ನಬಸಪ್ಪ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ, ವಿಜ್ಞಾನ ಗೋಷ್ಠಿ ಮತ್ತು ಡಿ. ದೇವರಾಜ ಅರಸು ಜೀವನ ಮತ್ತು ಸಾಧನೆ ಕುರಿತಾದ ಪ್ರಬಂಧ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಜ್ಞಾನದೊಂದಿಗೆ ವಿದ್ಯಾರ್ಥಿ ಗಳು ಸಾಂಘಿಕವಾಗಿ ಪರಿಸರ ಸಂರಕ್ಷಣೆಯ ದೃಷ್ಟಿಯಲ್ಲಿ ಕೆಲಸ ಮಾಡಬೇಕು. ವಿದ್ಯಾರ್ಥಿಗಳು ಕ್ರಿಯಾತ್ಮಕವಾದ ಕೆಲಸಗಳನ್ನು ಮಾಡಲು ಹೇರಳ ಅವಕಾಶಗಳಿವೆ. ಹುಡುಕುವ, ಅನುಸರಿಸುವ, ಅಳವಡಿಸಿಕೊಳ್ಳುವ ಮನೋಭಾವನೆ ಪ್ರತಿಯೋರ್ವ ವಿದ್ಯಾರ್ಥಿಗಳಲ್ಲಿ ಇದ್ದರೆ ಮಾತ್ರ ವಿಜ್ಞಾನ ವಿಷಯದಲ್ಲಿ ಹೆಚ್ಚಿನ ಜ್ಞಾನವನ್ನು ಸಂಪಾದಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ತಾಲೂಕು ಪಂಚಾಯಿತಿ ಸದಸ್ಯೆ ತಂಗಮ್ಮ ಮಾತನಾಡಿ, ಇಂದು ಪರಿಸರದ ಮೇಲೆ ಮಾನವನ ದೌರ್ಜನ್ಯ ಹೆಚ್ಚಾಗಿದೆ. ಇದರಿಂದಾಗಿ ಪರಿಸರದಲ್ಲಿ ಅಸಮತೋಲನ ಉಂಟಾಗಿದ್ದು, ವಿದ್ಯಾರ್ಥಿಗಳು ಪ್ರೀತಿ, ಕಾಳಜಿ, ಅನುಕಂಪದೊಂದಿಗೆ ಪರಿಸರ ರಕ್ಷಣೆಯ ಸಂಕಲ್ಪವನ್ನು ಮಾಡಬೇಕು. ಪರಿಸರವನ್ನು ರಕ್ಷಿಸಿದರೆ ಮಾತ್ರ ನಾವು ಆರೋಗ್ಯದಿಂದ ಇರಲು ಸಾಧ್ಯ ಎಂದರು.

ರಾಷ್ಟ್ರೀಯ ಪರಿಸರ ಜಾಗೃತಿ ಆಂದೋಲನದ ರಾಜ್ಯ ಸಂಚಾಲಕ ಪ್ರೇಮ್‍ಕುಮಾರ್ ಮಾತನಾಡಿ, ಸ್ವಚ್ಛ ಭಾರತದ ಪರಿಕಲ್ಪನೆಯೊಂದಿಗೆ ವಿದ್ಯಾರ್ಥಿಗಳು ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೋರ್ವರೂ ಒಂದೊಂದು ಗಿಡಗಳನ್ನಾದರೂ ನೆಟ್ಟು ಪೋಷಿಸುವ ಪ್ರತಿಜ್ಞೆ ಮಾಡಬೇಕೆಂದು ಕರೆ ನೀಡಿದರು.

ವೇದಿಕೆಯಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಂಗಾರು ನಾಯಕ್, ಪ್ರೌಢಶಾಲಾ ಮುಖ್ಯ ಶಿಕ್ಷಕ ತಳವಾರ್, ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ರಮೇಶ್, ಶಿಕ್ಷಣ ಸಂಯೋಜಕರುಗಳಾದ ಕೆ. ಮೂರ್ತಿ ಮತ್ತು ರಾಮಚಂದ್ರ ಮೂರ್ತಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ್ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ತಾಲೂಕಿನ ಸುಮಾರು 400ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.