ಸೋಮವಾರಪೇಟೆ, ಜ. 8: ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ತಯಾರು ಮಾಡಿ ಅಂಕಗಳಿಸುವದಕ್ಕೆ ಮೀಸಲಿರಿಸದೆ ಅವರಲ್ಲಿ ಪ್ರಾಪಂಚಿಕ ಜ್ಞಾನವನ್ನು ಬೆಳೆಸುವದು ಶಿಕ್ಷಕರ ಜವಾಬ್ದಾರಿ ಎಂದು ಇಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ಎಫ್. ದೊಡ್ಡಮನಿ ಅಭಿಪ್ರಾಯಪಟ್ಟರು.

ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲೂಕು ಘಟಕ, ತಾಲೂಕು ಕಾನೂನು ಸೇವಾ ಸಮತಿ ಹಾಗೂ ವಕೀಲರ ಸಂಘಗಳ ವತಿಯಿಂದ ಇಲ್ಲಿನ ಸಂತ ಜೋಸೆಫರ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಕಾನೂನು ಅರಿವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಮನೆಯೇ ಮೊದಲ ಪಾಠ ಶಾಲೆಯಾಗಿರುವದರಿಂದ ಕಾನೂನಿನ ಅರಿವು ಮನೆಯಿಂದಲೇ ಪ್ರಾರಂಭವಾಗಬೇಕು. ಅದನ್ನು ಶಿಕ್ಷಕರು ಮುಂದುವರೆಸಬೇಕು ಎಂದರು.

ಸಿವಿಲ್ ನ್ಯಾಯಾಧೀಶ ಶ್ಯಾಮ್ ಪ್ರಕಾಶ್ ಮಾತನಾಡಿ, ಇಂದು ಸಮಾಜದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಮಹಿಳೆಯರಿಗೆ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನೀಡುವ ಅಶ್ಲಿಲ ಕಿರುಕುಳಗಳು ಫೋಸ್ಕೋ ಕಾಯಿದೆಯಡಿ ಬರುತ್ತದೆ. ಇದು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದ್ದು, ಇದರಲ್ಲಿ ಸಿಲುಕಿರುವವರು ಉಚಿತ ಕಾನೂನಿನ ನೆರವು ಪಡೆಯಲು ಅವಕಾಶವಿದೆ. ಇದನ್ನು ಸರ್ವರೂ ಬಳಸಿಕೊಳ್ಳಬೇಕೆಂದರು.

ಕಾರ್ಯಾಗಾರದ ಅಧ್ಯಕ್ಷತೆಯನ್ನು ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ತಾಲೂಕು ಘಟಕದ ಅಧ್ಯಕ್ಷ ಪಿ. ಮಧು ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಅಭಿಮನ್ಯು ಕುಮಾರ್, ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆಯ ರಾಜ್ಯ ಘಟಕದ ಕಾರ್ಯದರ್ಶಿ ನಾರಾಯಣ, ಕಾಲೇಜಿನ ಪ್ರಾಂಶುಪಾಲ ವಿನ್ಸೆಂಟ್ ಮೊಂತೆರೋ ಮತ್ತಿತರರು ಉಪಸ್ಥಿತರಿದ್ದರು.