ಮಡಿಕೇರಿ, ಸೆ. 17: ಕೆ.ಎಲ್.ಇ. ಸಂಸ್ಥೆಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೆ.ಎಲ್.ಇ. ಸಂಸ್ಥೆಯ ನೆರವು ಹಾಗೂ ಉಪನಿರ್ದೇಶಕರು, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಯೋಗ ದೊಂದಿಗೆ ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯಲ್ಲಿ ರಾಜ್ಯದ ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಮತ್ತು ಕಾಲೇಜು ವಿಭಾಗಗಳು (ಪದವಿ ವಿಜ್ಞಾನ ಮತ್ತು ಪದವಿಪೂರ್ವ ವಿಜ್ಞಾನ ಕಾಲೇಜುಗಳು) ಭಾಗವಹಿಸ ಬಹುದು.

ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯನ್ನು ತಾ. 21 ರವರೆಗೆ ಆಯೋಜಿಸಲಾಗಿದ್ದು, ಈ ಸ್ಪರ್ಧೆಯಲ್ಲಿ ವಿಷಯವಾರು ಉದ್ದೇಶಿತ ಗುಂಪುಗಳು ಭಾಗವಹಿಸಬಹುದು.

ಪ್ರಾಥಮಿಕ ವಿಭಾಗದಿಂದ ಅತ್ಯುತ್ತಮ ಪ್ರದರ್ಶನ ನೀಡುವ ನಗರ ವಿಭಾಗದಿಂದ 2 ತಂಡಗಳು ಮತ್ತು ಗ್ರಾಮೀಣ ವಿಭಾಗದಿಂದ 2 ತಂಡಗಳಂತೆ ಒಟ್ಟು 4 ತಂಡಗಳನ್ನು ಆಯ್ಕೆ ಮಾಡಲಾಗುವದು. ಪ್ರಾಥಮಿಕ ವಿಭಾಗದವರು ಪುನರ್ ಬಳಸ ಬಹುದಾದ ಶಕ್ತಿಯ ಮೂಲಗಳು ಮತ್ತು ಮಾಲಿನ್ಯ ನಿಯಂತ್ರಣ ಈ ಎರಡು ವಿಷಯಗಳನ್ನು ಮತ್ತು ಮಾಧ್ಯಮಿಕ, ಪ್ರೌಢಶಾಲೆಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ನಗರ ವಿಭಾಗದಿಂದ 2 ತಂಡಗಳು ಮತ್ತು ಗ್ರಾಮೀಣ ವಿಭಾಗದಿಂದ 2 ತಂಡ ಗಳಂತೆ ಒಟ್ಟು 4 ತಂಡಗಳನ್ನು ಆಯ್ಕೆ ಮಾಡಲಾಗುವದು.

ಮಾಧ್ಯಮಿಕ, ಪ್ರೌಢ ವಿಭಾಗದವರು ಅನ್ವಯಿಕ ಗಣಿತ, ಜೀವ ವೈವಿಧ್ಯ ಸಂರಕ್ಷಣೆ ಈ ಎರಡು ವಿಷಯಗಳನ್ನು ಮತ್ತು ಪದವಿಪೂರ್ವ ಮತ್ತು ವಿಜ್ಞಾನ ಪದವಿ ಕಾಲೇಜುಗಳ ವಿಭಾಗದಿಂದ ಅತ್ಯುತ್ತಮ ಪ್ರದರ್ಶನ ನೀಡುವ 2 ತಂಡಗಳನ್ನು ಆಯ್ಕೆ ಮಾಡಲಾಗುವದು. ಕಾಲೇಜು ವಿದ್ಯಾರ್ಥಿಗಳು ಸ್ಮಾರ್ಟ್ ಸಿಟಿ, ‘ಮಾಹಿತಿ ಸಂವಹನ ಮತ್ತು ಉಪಗ್ರಹಗಳು' ಈ ವಿಷಯಗಳಲ್ಲಿ ಭಾಗವಹಿಸಬಹುದು. ಒಟ್ಟು ಒಂದು ಜಿಲ್ಲೆಯಿಂದ 10 ತಂಡಗಳನ್ನು ಜಿಲ್ಲಾ ಮಟ್ಟದಲ್ಲಿ ಆಯ್ಕೆ ಮಾಡಿ ರಾಜ್ಯಮಟ್ಟಕ್ಕೆ ಕಳುಹಿಸಲಾಗುವದು.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ ರೂ. 25 ಸಾವಿರ, ದ್ವಿತೀಯ ರೂ. 15 ಸಾವಿರ ಹಾಗೂ ತೃತೀಯ ರೂ. 10 ಸಾವಿರ ನಗದು ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ನೀಡಲಾಗುವದು. ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು ತಮ್ಮ ಮಾರ್ಗದರ್ಶಿ ಶಿಕ್ಷಕರೊಂದಿಗೆ ಅಕ್ಟೋಬರ್, 6 ಮತ್ತು 7 ರಂದು ಹುಬ್ಬಳ್ಳಿಯ ಪಿ.ಸಿ.ಜಾಬಿನ ವಿಜ್ಞಾನ ಮಹಾವಿದ್ಯಾಲಯ, ವಿದ್ಯಾನಗರ ಇಲ್ಲಿ ಹಾಜರಾಗುವದು. ಕೆ.ಎಲ್.ಇ. ಸೊಸೈಟಿಯು ವಿಜೇತ ವಿದ್ಯಾರ್ಥಿಗಳ ಮತ್ತು ಮಾರ್ಗದರ್ಶಿ ಶಿಕ್ಷಕರ ಉಪನ್ಯಾಸಕರಿಗೆ ಪ್ರಯಾಣ, ಊಟೋಪಚಾರ ಮತ್ತು ವಾಸ್ತವ್ಯದ ವ್ಯವಸ್ಥೆಯನ್ನು ಕಲ್ಪಿಸುವದು (ಕೆ.ಎಸ್.ಆರ್.ಟಿ.ಸಿ. ಸಾಮಾನ್ಯ ಬಸ್ ಪ್ರಯಾಣ ದರ, ಸಾಮಾನ್ಯ ದರ್ಜೆ ರೈಲು ಪ್ರಯಾಣ ದರ). ಹೆಚ್ಚಿನ ಮಾಹಿತಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಚೇರಿಯನ್ನು ಸಂಪರ್ಕಿಸ ಬಹುದು ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ ಅವರು ತಿಳಿಸಿದ್ದಾರೆ.