ಮಡಿಕೇರಿ, ಆ. 28: ವಿಘ್ನ ನಿವಾರಕ, ಆದಿ ಪೂಜಿತ ಗಣಪತಿಯನ್ನು ಆರಾಧಿಸುವಂತಹ ಗಣೇಶ ಚತುರ್ಥಿ ಸಮೀಪಿಸುತ್ತಿದ್ದು, ಎಲ್ಲೆಡೆ ಗಣೇಶನ ಆಗಮನಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಜಿಲ್ಲಾ ಕೇಂದ್ರ ಮಂಜಿನ ನಗರಿ ಮಡಿಕೇರಿಯಲ್ಲಿ ವಿನಾಯಕನ ಆರಾಧನೆಗಾಗಿ ತಯಾರಿ ನಡೆಯುತ್ತಿದ್ದು, ಗಣೇಶೋತ್ಸವ ಆಚರಣಾ ಸಮಿತಿಗಳು ಸಂಭ್ರಮದ ಉತ್ಸವ ಆಚರಣೆಗೆ ಸಿದ್ಧತೆ ಕೈಗೊಂಡಿವೆ.
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಮೂವತ್ತಕ್ಕೂ ಅಧಿಕ ಕಡೆಗಳಲ್ಲಿ ಪ್ರತಿಬಾರಿಯಂತೆ ಈ ಬಾರಿಯು ಗಣಪತಿ ಆರಾಧನೆ ನಡೆಯಲಿದೆ. ಶಾಂತಿನಿಕೇತನ ಯುವಕ ಸಂಘ, ಧಾರ್ಮಿಕ್ ಯುವ ವೇದಿಕೆ, ಜ್ಯೋತಿ ನಗರ ಶಿವಶಕ್ತಿ ಯುವಕ ಸಂಘ, ಹಿಂದೂ ಯುವ ಶಕ್ತಿ ಕೋಹಿನೂರು ರಸ್ತೆ, ಸ್ವಸ್ತಿಕ್ ಯುವ ವೇದಿಕೆ, ಕೆಎಸ್ಆರ್ಟಿಸಿ ಗಣಪತಿ ಸೇವಾ ಸಮಿತಿ, ವಿನಾಯಕ ಯುವಕ ಮಿತ್ರ ಮಂಡಳಿ, ಶ್ರೀ ಸಿದ್ಧಿ ವಿನಾಯಕ ಸೇವಾ ಸಮಿತಿ, ಶ್ರೀ ವಿದ್ಯಾ ವಿನಾಯಕ ಯುವಕ ಮಂಡಳಿ, ಸಾರ್ವಜನಿಕ ಗಣೇಶೋತ್ಸವ ಸಮಿತಿ ಖಾಸಗಿ ಬಸ್ ನಿಲ್ದಾಣ, ಓಂಕಾರ್ ಯುವ ವೇದಿಕೆ, ಸಂಪಿಗೆ ಕಟ್ಟೆ ಯುವಕ ಸಂಘ, ಶ್ರೀ ಆದಿಪರಾಶಕ್ತಿ ಯುವಕ ಸಂಘ, ಅಶೋಕಪುರ ಗಣಪತಿ ಸೇವಾ ಸಮಿತಿ, ಶ್ರೀ ಗಣೇಶ ಭಕ್ತ ಮಂಡಳಿ ಬಸವೇಶ್ವರ ದೇವಾಲಯ, ವಿದ್ಯಾನಗರ ವಿನಾಯಕ ಉತ್ಸವ ಸಮಿತಿ, ಅಭಿಷ್ಟಪ್ರದ ಗಣಪತಿ ಸಮಿತಿ, ಉದ್ಭವ ಶ್ರೀ ವಿನಾಯಕ ಸೇವಾ ಸಮಿತಿ, ಮೆಸ್ಕಾಂ ಗಣೇಶೋತ್ಸವ ಸಮಿತಿ, ಕಾಮಾಕ್ಷಿ ಯುವಕ ಸಂಘ, ಪಾರ್ಕ್ ಸೈಡ್ ಗಣಪತಿ ಸಮಿತಿ, ನಗರಸಭೆ ಪೌರಕಾರ್ಮಿಕರ ಗಣಪತಿ ಸಮಿತಿ, ಗಣಪತಿ ಬೀದಿ ಗಣಪತಿ ಯುವಕ ಸಂಘ, ಶ್ರೀ ಪ್ರಸನ್ನ ಗಣಪತಿ ಯುವಕ ಸಂಘ, ಕಾನ್ವೆಂಟ್ ಜಂಕ್ಷನ್ ಮಹಾಗಣಪತಿ ಸೇವಾ ಸಮಿತಿ, ಭಗವತಿ ನಗರ ಭಗವತಿ ಯುವಕ ಸಂಘ, ಸ್ಕಂದ ಯುವಕ ಸಂಘ, ಮುನೀಶ್ವರ ಯುವಕ ಸಂಘ, ಗಣನಾಯಕ ಸೇವಾ ಸಮಿತಿ, ದೃಷ್ಟಿಗಣಪತಿ ಯುವಕ ಸಂಘ, ಜ್ಯೋತಿ ಯುವಕ ಸಂಘ, ದೇಚೂರು ಗಣಪತಿ ಸಮಿತಿಗಳು ಗಣಪತಿ ಆರಾಧನೆಯನ್ನು ಮಾಡಲಿವೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಮಿತಿಗಳ ಸಭೆ ನಡೆಸಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಮಾಹಿತಿ ನೀಡಿದೆ.
ಮಂಟಪಗಳಲ್ಲಿ ಡಿಜೆ ಬಳಕೆ ಯನ್ನು ನಿಷೇಧಿಸಲಾಗಿದ್ದು, ರಾತ್ರಿ 12 ಗಂಟೆಯೊಳಗಾಗಿ ಗಣಪತಿಯನ್ನು ವಿಸರ್ಜಿಸಬೇಕು. ಬಂಟಿಂಕ್ಸ್, ಬ್ಯಾನರ್ಗಳನ್ನು ಅಳವಡಿಸುವದಾದರೆ ನಗರಸಭೆ, ಪೊಲೀಸ್ ಇಲಾಖೆಯಿಂದ ಅನುಮತಿ ಪಡೆಯಲು ಸಭೆಯಲ್ಲಿ ಸೂಚಿಸಲಾಗಿದೆ.
ವಿವಿಧ ಭಂಗಿಯ ಗಣಪ: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಈ ಬಾರಿ ವಿವಿಧ ಸಮಿತಿಗಳು ವಿವಿಧ ಭಂಗಿಯ ಗಣೇಶ ಮೂರ್ತಿಗಳನ್ನು ಪ್ರತಿಷ್ಟಾಪಿಸಲಿವೆ. ಮಡಿಕೇರಿಯ ಕಲಾವಿದರಾದ ಗೌಡ ಸಮಾಜ ಸಮೀಪ ರವಿ ಮತ್ತು ಬಳಗ ಪೆನ್ಷನ್ಲೇನ್ನ ಸುನಿಲ್ ಮತ್ತು ತಂಡ ಗಣಪತಿ ಮೂರ್ತಿ ಹಾಗೂ ವಿಸರ್ಜನಾ ಮೆರವಣಿಗೆಗೆ ‘ಟ್ಯಾಬ್ಲೋ’ ತಯಾರಿಯಲ್ಲಿ ತೊಡಗಿಸಿಕೊಂಡಿದೆ. ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ.
-ಉಜ್ವಲ್