ಸೋಮವಾರಪೇಟೆ, ಆ.1: ವಿಕಲಚೇತನರ ಬಗ್ಗೆ ಯಾರೂ ಸಹ ಕೀಳರಿಮೆ ಹೊಂದಬಾರದು. ಅವರಿಗೂ ಅವಕಾಶಗಳನ್ನು ನೀಡಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಯಬೇಕು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವ ಶಿಕ್ಷಣ ಅಭಿಯಾನ, ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಮತ್ತು ರೋಟರಿ ಸಂಸ್ಥೆಯ ವತಿಯಿಂದ ಇಲ್ಲಿನ ಚೆನ್ನಬಸಪ್ಪ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಂಗವೈಕಲ್ಯ ಎಂಬದು ಶಾಪವಲ್ಲ; ವಿಕಲಚೇತನರಿಗೆ ಸಮಾಜ ಇನ್ನಷ್ಟು ಅವಕಾಶಗಳನ್ನು ನೀಡುವ ಮೂಲಕ ಸಮಾನತೆಯ ಭಾವ ಮೂಡಿಸಬೇಕು. ಎಳೆಯ ವಯಸ್ಸಿನಲ್ಲಿಯೇ ಮಕ್ಕಳ ಅಂಗಾಂಗ ವೈಫಲ್ಯಗಳ ಬಗ್ಗೆ ಜಾಗೃತಿ ವಹಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಪೋಷಕರು ಮುಂದಾಗಬೇಕು. ಸರ್ಕಾರವೂ ಸಹ ವಿಕಲಚೇತನರ ಅಭ್ಯುದಯಕ್ಕೆ ಹಲವಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಜಿ.ಪಂ. ಸದಸ್ಯೆ ಪೂರ್ಣಿಮಾ ಗೋಪಾಲ್, ತಾ.ಪಂ. ಉಪಾಧ್ಯಕ್ಷ ಅಭಿಮನ್ಯುಕುಮಾರ್, ಸದಸ್ಯೆ ತಂಗಮ್ಮ, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮಿ ಸುರೇಶ್, ಸದಸ್ಯೆ ಶೀಲಾ ಡಿಸೋಜ, ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲೇಸ್ವಾಮಿ, ಇಲಾಖೆಯ ಜಿಲ್ಲಾ ಸಮನ್ವಯಾಧಿಕಾರಿ ಭಾಗ್ಯಲಕ್ಷ್ಮಿ, ರೋಟರಿ ಅಧ್ಯಕ್ಷ ಭರತ್ ಭೀಮಯ್ಯ, ಎಪಿಸಿ ಮಹಾದೇವ್, ಬಿಆರ್‍ಸಿಗಳು ಉಪಸ್ಥಿತರಿದ್ದರು. ಶಿಬಿರದಲ್ಲಿ ಬಹು ಅಂಗವೈಕಲ್ಯ, ದೃಷ್ಟಿ, ಶ್ರವಣದೋಷ ಸೇರಿದಂತೆ ಇನ್ನಿತರ ಸಮಸ್ಯೆಗಳಿದ್ದ ಮಕ್ಕಳನ್ನು ಮೆಡಿಕಲ್ ಕಾಲೇಜಿನ ವೈದ್ಯರು ತಪಾಸಣೆ ನಡೆಸಿದರು.