ಮಡಿಕೇರಿ, ನ. 26: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.ಬಿಳಿ ಬಣ್ಣದ ನೋಂದಣಿ ಹೊಂದಿರುವ ಕಾರುಗಳು ಟ್ಯಾಕ್ಸಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರಿಂದ ಹಳದಿ ಬಣ್ಣದ ನೋಂದಣಿ ಹೊಂದಿರುವ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರು ಸಂಕಷ್ಟಕ್ಕೀಡಾಗಿದ್ದಾರೆ. ಆದ್ದರಿಂದ ಬಿಳಿ ಬಣ್ಣದ ನೋಂದಣಿ ಹೊಂದಿರುವ ಕಾರುಗಳು ಬಾಡಿಗೆ ನಡೆಸುವದಕ್ಕೆ ಕಡಿವಾಣ ಹಾಕಬೇಕೆಂದು ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆಯನ್ನು ಆಗ್ರಹಿಸಿದರು.

ಹೋಂಸ್ಟೇಗಳ ಮಾಲೀಕರು ವೈಟ್ ಬೋರ್ಡ್ ಕಾರುಗಳನ್ನು ಬಳಸಿ ಪ್ರವಾಸಿಗರನ್ನು ಬಾಡಿಗೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ತಮಗೆ ಬಾಡಿಗೆಯೇ ಇಲ್ಲವಾಗಿದೆ. ಜಿಲ್ಲಾಡಳಿತ, ಸಾರಿಗೆ ಹಾಗೂ ಪೊಲೀಸ್ ಇಲಾಖೆಗೆ ಈ ಕುರಿತು ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಕೊಡು ಜಿಲ್ಲಾ ಪ್ರವಾಸಿಗರ ವಾಹನ ಮಾಲೀಕರು ಮತ್ತಿ ಚಾಲಕದ ಸಂಘದ ಮುಖಂಡ ರವಿ ಮಾತನಾಡಿ, ಸರಕಾರಕ್ಕೆ ತೆರಿಗೆ ಪಾವತಿಸುವ ತಮಗೆ ಬಾಡಿಗೆ ಇಲ್ಲವಾಗಿದೆ. ಜಿಲ್ಲೆಯ ಗಡಿ ಭಾಗದಲ್ಲಿ ಸಾರಿಗೆ ಇಲಾಖೆಯ ಚೆಕ್‍ಪೋಸ್ಟ್ ಇಲ್ಲದಿರುವದರಿಂದ ಅಂತರರಾಜ್ಯ ವಾಹನ ತೆರಿಗೆ ಸಮಗ್ರಹವಾಗುತ್ತಿಲ್ಲ. ಕೊಡಗಿನ ವಾಹನಗಳು ಕೇರಳವನ್ನು ಪ್ರವೇಶಿಸಿದ ತಕ್ಷಣ ದುಬಾರಿ ವಾಹನ ತೆರಿಗೆ ಕಟ್ಟಬೇಕು. ಆದರೆ ಕೊಡಗಿಗೆ ಬರುವ ವಾಹನಗಳಿಗೆ ಈ ತೆರಿಗೆಯಿಂದ ವಿನಾಯಿತಿ ಇದೆ. ದಸರಾ ವಿಶೇಷ ಎಂದು ಇತರ ರಾಜ್ಯಕ್ಕೆ ವಿನಾಯಿತಿ ನೀಡುವಾಗ ಶಬರಿಮಲೆ ವಿಶೇಷ ಎಂದು ಕರ್ನಾಟಕದ ವಾಹನಗಳಿಗೆ ವಿನಾಯಿತಿ ನೀಡಿ ಅಂತರರಾಜ್ಯ ತೆರಿಗೆ ವಿಧಿಸಬಾರದು ಆಗ್ರಹಿಸಿದರು.

ಅಂತರರಾಜ್ಯ ಗಡಿಯಲ್ಲಿ ವಾಹನ ತಪಾಸಣೆಯನ್ನು ಕಟ್ಟುನಿಟ್ಟಾಗಿ ಮಾಡಬೇಕು. ಇಲ್ಲದಿದ್ದರೆ ಅಕ್ರಮ ಪ್ರವೇಶ ಮಾಡುವ ವಾಹನಗಳನ್ನು ತಡೆದು ಪ್ರತಿಭಟನೆ ಮಾಡಲಾಗುವದು ಎಂದು ಎಚ್ಚರಿಸಿರುವ ಸಂಘಟನೆ ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಡಳಿತ ಹಾಗೂ ಸರಕಾರಕ್ಕೆ ಮನವಿ ಸಲ್ಲಿಸಿತು.

ಪ್ರತಿಭಟನೆಯಲ್ಲಿ ಸಂಘದ ಪದಾಧಿಕಾರಿಗಳಾದ ಸೋನ್ಸ್, ಪ್ರದೀಪ್, ಸಂಪತ್ ಕುಮಾರ್, ಉಮೇಶ್, ಶಿವಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.