ಶ್ರೀಮಂಗಲ, ಜು. 20: ಡಿ.ವೈ.ಎಸ್.ಪಿ. ಗಣಪತಿ ಸಾವು ಪ್ರಕರಣದ ಸತ್ಯಾಸತ್ಯತೆಯನ್ನು ಬೆಳಕಿಗೆ ತರಲು ಹಾಗೂ ಗಣಪತಿ ಕುಟುಂಬಕ್ಕೆ ನ್ಯಾಯ ದೊರಕಿಸುವ ಉದ್ದೇಶದಿಂದ ಪೊನ್ನಂಪೇಟೆ ಕೊಡವ ಸಮಾಜದ ನೇತೃತ್ವದಲ್ಲಿ ಪೊನ್ನಂಪೇಟೆಯಿಂದ ಮಡಿಕೇರಿಯವರೆಗೆ ಹಮ್ಮಿಕೊಂಡಿದ್ದ ವಾಹನ ಜಾಥಾಕ್ಕೆ ರಾಜಕೀಯ ರಹಿತವಾಗಿ ಎಲ್ಲಾ ಪಕ್ಷದ ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡಿ ಯಶಸ್ವಿಗೊಳಿಸಲು ಕಾರಣಕರ್ತ ರಾಗಿದ್ದು, ಈ ಹೋರಾಟಕ್ಕೆ ರಾಜಕೀಯ ಲೇಪ ಸರಿಯಲ್ಲ ಎಂದು ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಈ ಬಗ್ಗೆ ನೀಡಿರುವ ಲಿಖಿತ ಹೇಳಿಕೆಯಲ್ಲಿ ವಾಹನ ಜಾಥಾದ ಪೂರ್ವಭಾವಿ ಸಭೆಯಲ್ಲಿ ಎಲ್ಲಾ ಸಂಘ-ಸಂಸ್ಥೆ, ಪಕ್ಷ ಭೇದ ಮರೆತು ಭಾಗವಹಿಸಿ ಬೆಂಬಲ ನೀಡುವಂತೆ ಕೋರÀಲಾಗಿತ್ತು. ಈ ಹಿನ್ನೆಲೆ ಎಲ್ಲಾ ಪಕ್ಷದ ಕಾರ್ಯಕರ್ತರು ಜಿಲ್ಲೆಯ ವಿವಿಧ ಕೊಡವ ಸಮಾಜ, ವಿವಿಧ ಕೊಡವ ಸಂಘ ಸಂಸ್ಥ್ಥೆಗಳು, ಸಂಘ ಪರಿವಾರದವರು ಜಾಥಾದಲ್ಲಿ ಭಾಗವಹಿಸಿದ್ದರು. ಕೊಡವ ಸಮಾಜ, ಕೊಡವ ಸಮುದಾಯದ ಪ್ರಾತಿನಿಧಿಕ ಸಂಸ್ಥೆಯಾಗಿದ್ದು, ಎಲ್ಲಾ ರಾಜಕೀಯ ಪಕ್ಷದಲ್ಲಿ ಗುರುತಿಸಿಕೊಂಡಿರುವ ಕೊಡವ ಸಮುದಾಯದವರು ಸಹ ಈ ಸಂಸ್ಥೆಯ ನೆರಳಲ್ಲಿ ಇರುತ್ತಾರೆ. ಪಕ್ಷಕ್ಕಿಂತ ಸಮುದಾಯ ಮತ್ತು ಸಮಾಜ ದೊಡ್ಡದಾಗಿದೆ. ಹೀಗಿರುವಾಗ ಗಣಪತಿ ಪ್ರಕರಣದಲ್ಲಿ ಯಾವದೇ ಒಂದು ರಾಜಕೀಯ ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆಯುವ ಹೋರಾಟದಲ್ಲಿ ಸಮಾಜ ಭಾಗವಹಿಸಲಿಲ್ಲ. ಪ್ರತ್ಯೇಕವಾಗಿ ಹೋರಾಟ ನಡೆಸಬೇಕಾಯಿತು ಎಂದು ತಿಳಿಸಿದ್ದಾರೆ.