ಸಿದ್ದಾಪುರ,ಅ.2: ವಾಲ್ನೂರು ತ್ಯಾಗತ್ತೂರು ಗ್ರಾಮ ಪಂಚಾಯಿತಿ ಗ್ರಾಮ ಸಭೆ ನಾಗರತ್ನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯಲ್ಲಿ ವಸತಿ ಸೌಕರ್ಯದ ವಿಷಯದ ಕುರಿತು ಗಂಭೀರವಾದ ಚರ್ಚೆ ನಡೆಯಿತು.

ಸರಕಾರದಿಂದ ವಸತಿ ಹೀನ ಗಿರಿಜನರಿಗೆ ವಸತಿ ಸೌಕರ್ಯ ಕಲ್ಪಿಸುವಂತೆ ಆದೇಶ ಬಂದ ಹಿನ್ನಲೆ ಅರ್ಹ ಫಲಾನುಭವಿಗಳ ಪಟ್ಟಿ ತಯಾರಿಸಿ ಸೌಕರ್ಯ ಕಲ್ಪಿಸುವ ಬಗ್ಗೆ ಆದೇಶದ ಪ್ರತಿಯನ್ನು ಓದುತ್ತಿದಂತೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಭುವನೇಂದ್ರ ಆಕ್ಷೇಪಿಸಿ, ಗಿರಿಜನ ಹಾಡಿಯಲ್ಲಿನ ಬಹುತೇಕ ಮಂದಿ ಹಣದ ಆಸೆಗೆ ಇತರ ಮತಕ್ಕೆ ಮತಾಂತರವಾಗುತ್ತಿದ್ದಾರೆ. ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳುವ ಈ ಮಂದಿ ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಮತಾಂತರದ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತವರಿಗೆ ಸರಕಾರದ ಸವಲತ್ತು ನೀಡಲು ತನ್ನ ಆಕ್ಷೇಪಣೆಯಿದೆ ಎಂದು ಪ್ರತಿಕ್ರಿಯಿಸುತ್ತಿದ್ದಂತೆ ಮತ್ತೋರ್ವ ಸದಸ್ಯ ಅಂಚೆಮನೆ ಸುಧಿ ಇದಕ್ಕೆ ಬೆಂಬಲ ವ್ಯಕ್ತ ಪಡಿಸಿ ಬಹುತೇಕ ಮಂದಿಯ ಹೆಸರಿನಲ್ಲಿ ಮೊಕದ್ದಮೆಗಳು ದಾಖಲಾಗಿದೆ ಸಂಬಂಧ ಪಟ್ಟ ಸಮಾಜ ಕಲ್ಯಾಣ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸುವದರೊಂದಿಗೆ ಇಲಾಖೆಯ ಹಣ ದುರುಪಯೋಗವಾಗದಂತೆ ಎಚ್ಚರವಹಿಸುವಂತೆ ಒತ್ತಾಯಿಸಿದರು.

ಅಲ್ಪ ಮೊತ್ತದ ಆದಾಯ ದೊಂದಿಗೆ ಸಾಗುತ್ತಿರುವ ಗ್ರಾಮ ಪಂಚಾಯಿತಿಗೆ ಬಹುತೇಕ ಮಂದಿ ರೂ.600 ರಿಂದ 3ಸಾವಿರದಷ್ಟು ನೀರಿನ ಕರ ಬಾಕಿ ಉಳಿಸಿ ಕೊಂಡಿದ್ದು.ಅಬಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಅಧ್ಯಕ್ಷರು ಪ್ರಸ್ತಾಪಿಸುತ್ತಿದಂತೆ. ನೀರಿನ ಕರ ಉಳಿಸಿಕೊಂಡವರಿಗೆ 10 ದಿನಗಳ ಕಾಲಾವಕಾಶ ನೀಡಿ. ಹಣ ಸಂದಾಯವಾಗದಿದ್ದರೆ ಅವರ ನೀರಿನ ಸಂಪರ್ಕ ಕಡಿತ ಗೊಳಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು. ಸಭೆಯಲ್ಲಿ ಇತರ ವಿಷಯಗಳ ಕುರಿತು ಚರ್ಚಿಸಲಾಯಿತು.

-ಅಂಚೆಮನೆಸುಧಿ